ಧಾರವಾಡ: ಧಾರವಾಡದ ಸಂತೋಷ ನಗರದಲ್ಲಿನ ಮನೆಯೊಂದರಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿತ್ತು. ಆಗಸ್ಟ್ 15ರ ಮುಂಜಾನೆ 9.20ರ ಸುಮಾರಿಗೆ ಮನೆಯಲ್ಲಿ ಬೆಂಕಿ ಹೊಂತಿಕೊಂಡಿದ್ದು, ಓರ್ವ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ತಂದೆಯ ಸ್ಥಿತಿಯ ಚಿಂತಾಜನಕವಾಗಿದೆ. ಅಗಸ್ತ್ಯ ಮಾಶ್ಯಾಳ್ (4 ವರ್ಷ) ಮೃತ ಬಾಲಕ. ಬಾಲಕನ ತಂದೆ ಚಂದ್ರಕಾಂತ್ ಅವರಿಗೆ ಸುಟ್ಟ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಚಂದ್ರಕಾಂತ್ ಅವರು ಕಿಮ್ಸ್ನ ಸುಟ್ಟಗಾಯ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ.
ಬೆಂಕಿ ಹೊತ್ತಿಕೊಂಡಿದ್ದು ಹೇಗೆ?
ಅಗಸ್ತ್ಯನ ತಾಯಿ ಕೆಲ ತಿಂಗಳ ಹಿಂದೆ ಎರಡನೇ ಮಗುವಿಗ ಜನ್ಮ ನೀಡಿದ್ದಾರೆ. ಹೀಗಾಗಿ, ಬಾಣಂತಿಗೆ ಬಿಸಿ ತಾಗಿಸಲು ಅಗ್ಗಿಷ್ಟಿಕೆಯನ್ನು ಬಳಸಲಾಗುತ್ತಿತ್ತು. ಅಗ್ಗಿಷ್ಟಿಕೆಗೆ ಬೆಂಕಿ ಹಂಚಲು ಬಾಲಕನ ಅಜ್ಜಿ ಪ್ರಯತ್ನಿಸುತ್ತಿದ್ದರು. ಆದರೆ, ನಿರಂತರ ಮಳೆಯಿಂದ ಅಗ್ಗಿಷ್ಟಿಕೆಯಲ್ಲಿದ್ದ ಕಟ್ಟಿಗೆ, ಬೆರಣಿ ಹಸಿಯಾಗಿದ್ದರಿಂದ ಬೆಂಕಿ ಹತ್ತುತ್ತಿರಲಿಲ್ಲ.
ಆಗ ಚಂದ್ರಕಾಂತ್, ಸ್ವಲ್ಪ ಥಿನ್ನರ್ ಹಾಕುವಂತೆ ಹೇಳಿದ್ದಾರೆ. ಥಿನ್ನರ್ ಹಾಕುತ್ತಿದ್ದಂತೆ ಬೆಂಕಿ ಜೋರಾಗಿ ಹೊತ್ತಿಕೊಂಡಿದೆ. ಬೆಂಕಿ ಥಿನ್ನರ್ ಬಾಟಲ್ಗೂ ಹತ್ತಿದೆ. ದಿಢೀರನೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ, ಥಿನ್ನರ್ ಬಾಟಲ್ ಅನ್ನು ಹೊರಗೆ ತಳ್ಳಲು ಅಗಸ್ತ್ಯನ ಅಜ್ಜಿ ಪ್ರಯತ್ನಿಸಿದ್ದಾರೆ. ಆದರೆ, ಬಾಟಲ್ ತಪ್ಪಿ, ಚಂದ್ರಕಾಂತ್ ಮತ್ತು ಅಗಸ್ತ್ಯ ಇದ್ದ ಕೋಣೆಯೊಳಗೆ ಹೋಗಿದೆ. ಕೋಣೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ, ಚಂದ್ರಕಾಂತ್ ಮತ್ತು ಆಗಸ್ತ್ಯ ಕೋಣೆಯಲ್ಲೇ ಸಿಲುಕಿಕೊಂಡಿದ್ದಾರೆ.
ಕೋಣೆಯಲ್ಲಿದ್ದ ಚಂದ್ರಕಾಂತ್ ಮತ್ತು ಅಗಸ್ತ್ಯನನ್ನು ರಕ್ಷಿಸಿ ಹೊರಗೆ ಕರೆದುಕೊಂಡು ಬರುವಷ್ಟರಲ್ಲಿ ಇಬ್ಬರಿಗೂ ಸಾಕಷ್ಟು ಸುಟ್ಟಗಾಯಗಳಾಗಿದ್ದವು. ಇಬ್ಬರನ್ನೂ ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಕೂಡ, ಬಾಲಕ ಅಗಸ್ತ್ಯ ಬದುಕುಳಿಯಲಿಲ್ಲ. ಅದೇ ಮನೆಯಲ್ಲಿ ಮೃತ ಅಗಸ್ತ್ಯನ ತಾಯಿ, ಅಜ್ಜಿ, ಪುಟ್ಟ ಮಗುವಿದ್ದು ಅವರು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಧಾರವಾಡ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಸಣ್ಣ ನಿರ್ಲಕ್ಷ್ಯವೊಂದು ಮಗುವಿನ ಸಾವಿಗೆ ಕಾರಣವಾಗಿದ್ದು ಮಾತ್ರ ದುರಂತವೇ ಸರಿ. ಮನೆಯಲ್ಲಿ ಅಪಾಯಕಾರಿ ವಸ್ತುಗಳನ್ನು ಇಡುವ ಮುಂಚೆ ಜಾಗೃತಿ ವಹಿಸಬೇಕಿದೆ.
For More Updates Join our WhatsApp Group :
