ಬೆಂಗಳೂರು – ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಪ್ರಕರಣದಲ್ಲಿ ಬಂಧಿಖಾನೆ ಹಾಗೂ ಸುಧಾರಣಾ ಇಲಾಖೆಯ ಅಧಿಕಾರಿಗಳು ರಾಜ್ಯ ಹೈಕೋರ್ಟ್ ದಿಕ್ಕು ತಪ್ಪಿಸಿರುವ ಕುರಿತು ಚರ್ಚೆಗಳಾಗುತ್ತಿವೆ. ದಶನ್ ಅವರು ಜೈಲಿನಲ್ಲಿ ತಮಗೆ ಅಗತ್ಯ ಪೌಷ್ಟಿಕಾಂಶ ಇರುವ ಆಹಾರಗಳು ದೊರೆಯುತ್ತಿಲ್ಲ.
ಹೀಗಾಗಿ ಮನೆಯೂಟಕ್ಕೆ ಅವಕಾಶ ಮಾಡಿಕೊಡಬೇಕು. ಬೆಡ್, ಚಮಚ ಹಾಗೂ ಇತರ ಸಣ್ಣಪುಟ್ಟ ಸೌಲಭ್ಯಗಳಿಗಾಗಿ 24ನೇ ಅಡಿಷನಲ್ ಛೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಅವರ ಮುಂದೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು 2024ರ ಜುಲೈ 25ರಂದು ದರ್ಶನ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಜುಲೈ 31ರಂದು ನಡೆದಿದ್ದ ವಿಚಾರಣೆಯಲ್ಲಿ ದರ್ಶನ್ ಪರ ವಕೀಲರು ಅರ್ಜಿಯನ್ನು ಹಿಂಪಡೆದುಕೊಂಡಿದ್ದರು.
ಆನಂತರ ದರ್ಶನ್ ಸಲ್ಲಿಸಿದ್ದ ಲಿಖಿತ ಮನವಿಯನ್ನು ಜೈಲಿನ ಸೂಪರಿಡೆಂಟ್ಗಳು ಆ.14ರಂದು ತಿರಸ್ಕರಿಸಿದ್ದಾರೆ ಎಂದು ಆ.20ರಂದು ಹೈಕೋರ್ಟ್ನ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಎದುರು ನಡೆದ ವಿಚಾರಣೆಯಲ್ಲಿ ಸರ್ಕಾರದ ವಿಶೇಷ ಅಭಿಯೋಜಕರು ತಿಳಿಸಿದರು.
ದರ್ಶನ್ ಅವರ ಅರ್ಜಿಯನ್ನು ತಿರಸ್ಕರಿಸಿರುವ ಆದೇಶವನ್ನು ಅದೇ ದಿನ ಅರ್ಜಿದಾರರಿಗೆ ತಲುಪಿಸಿರುವುದಾಗಿಯೂ ಹೇಳಿಕೆ ನೀಡಿದ್ದರು. ಈ ವೇಳೆ ಮತ್ತೊಂದು ಪ್ರಕರಣದಲ್ಲಿನ ಮಾಹಿತಿಯನ್ನು ಪ್ರಸ್ತಾಪಿಸಿದ ಬೇರೊಬ್ಬ ವಕೀಲರು ಜೈಲಿನ ಒಳಗೆ ಗಾಂಜಾ, ಬುಲೆಟ್ ಮತ್ತು ಬಂದೂಕುಗಳು ಬರುತ್ತಿವೆ. ಜೈಲಿನಲ್ಲೇ ಸುಫಾರಿ ಚರ್ಚೆಗಳು ನಡೆಯುತ್ತಿವೆ ಎಂದು ನ್ಯಾಯಾಧೀಶರ ಗಮನ ಸೆಳೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಆಹಾರದ ವ್ಯಾಪ್ತಿಯನ್ನು ನೀವು ವಿಸ್ತರಣೆ ಮಾಡಿದ್ದೀರಾ ಎಂದು ಬೇರೊಬ್ಬ ವಕೀಲರಿಗೆ ಲಘು ಹಾಸ್ಯ ಮಿಶ್ರಿತ ದಾಟಿಯಲ್ಲಿ ಹೇಳಿದ್ದರು.
ಈ ವಿಚಾರಣೆ ವೇಳೆ ಜೈಲಿನ ಅಧಿಕಾರಿಗಳು ದರ್ಶನ್ರ ಅರ್ಜಿಯನ್ನು ತಿರಸ್ಕರಿಸಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಸದರಿ ಆದೇಶವನ್ನು ತಾವು ಪರಿಶೀಲಿಸಲು ಸಮಯ ಬೇಕು ಎಂದು ದರ್ಶನ್ ಪರ ವಕೀಲ ಸಂಜೀವಿನಿ ಪ್ರಭುಲಿಂಗ ನಾವಡಗಿ ಹೇಳಿಕೆ ನೀಡಿದ್ದರು.
ಈ ಹಿನ್ನಲೆಯಲ್ಲಿ ನ್ಯಾಯಮೂರ್ತಿಗಳು ಕಾಲಾವಕಾಶ ನೀಡಿ ಮುಂದಿನ ವಿಚಾರಣೆಯನ್ನು ಸೆ.5ಕ್ಕೆ ಮುಂದೂಡಿದರು. ಹೈಕೋರ್ಟ್ ಮುಂದೆ ದರ್ಶನ್ರವರ ಅರ್ಜಿಯನ್ನು ತಿರಸ್ಕರಿಸಲಾಗಿದೆ, ಯಾವುದೇ ಹೆಚ್ಚುವರಿ ಸೌಲಭ್ಯ ನೀಡಿಲ್ಲ ಎಂದು ಹೇಳಿಕೆ ನೀಡಿದ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಅಧಿಕಾರಿಗಳು ಅನಧಿಕೃತವಾಗಿ ದರ್ಶನ್ಗೆ ರಾಜ್ಯಾತಿಥ್ಯ ನೀಡುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ವಿಚಾರಣೆಯ ಹಂತದಲ್ಲೇ ನ್ಯಾಯಮೂರ್ತಿಗಳು, ಅರ್ಜಿದಾರರು ಆಹಾರ ಕೇಳಿದರೆ ನೀಡುತ್ತಿಲ್ಲ. ಆದರೆ ಗಾಂಜಾ, ಬುಲೆಟ್, ಗನ್ಗಳು ಸರಬರಾಜಾಗುತ್ತಿವೆ ಎಂಬ ಆರೋಪಗಳಿವೆ. ಇದು ಹೇಗೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದರ್ಶನ್ ಅವರಿಗೆ ಬಿರಿಯಾನಿ ಸೇರಿದಂತೆ ಪೌಷ್ಟಿಕ ಆಹಾರ ನೀಡಬೇಕಾದರೆ ವೈದ್ಯರ ಸಲಹೆ ಶಿಫಾರಸ್ಸುಗಳ ಅಗತ್ಯವಿದೆ ಎಂದು ಸರ್ಕಾರದ ಪರ ವಕೀಲರು ಹೇಳಿದರು. ನ್ಯಾಯಾಲಯ ಕೂಡ ಜೈಲು ಬಂಧಿಗಳಿಗೂ ಅಗತ್ಯ ಪೋಷ್ಟಿಕಾಂಶದ ಅಗತ್ಯವಿದೆ. ಅದಕ್ಕೆ ಪೂರಕವಾದ ಆಹಾರವನ್ನು ಎಲ್ಲರಿಗೂ ಪೂರೈಸಬೇಕು ಎಂದು ಹೈಕೋರ್ಟ್ನ ನ್ಯಾಯಮೂರ್ತಿಗಳು ಹೇಳಿದ್ದರು.
ಈಗ ಬಿಡುಗಡೆಯಾಗಿರುವ ಫೋಟೋ ಹಾಗೂ ವಿಡಿಯೋಗಳಲ್ಲಿ ದರ್ಶನ್ ರೌಡಿಶೀಟರ್ಗಳಾದ ವಿಲ್ಸನ್ಗಾರ್ಡನ್ ನಾಗ, ಕುಳ್ಳ ಸೀನ ಹಾಗೂ ತಮ ಆಪ್ತ ಸಹಾಯಕ ನಾಗರಾಜು ಅವರೊಂದಿಗೆ ಚೇರಿನಲ್ಲಿ ಕುಳಿತು ಮಗ್ನಲ್ಲಿ ಟೀ ಕುಡಿಯುತ್ತಾ, ಸಿಗರೇಟ್ ಕೈಯಲ್ಲಿ ಹಿಡಿದುಕೊಂಡು ಲೋಕಾಭಿರಾಮವಾಗಿ ಮಾತನಾಡುತ್ತಿರುವುದು ಕಂಡುಬಂದಿದೆ.
ಜೊತೆಗೆ ಜೈಲಿನಲ್ಲಿರುವ ರೌಡಿಶೀಟರ್ವೊಬ್ಬ ಹೊರಗಿರುವ ತಮ ಪುತ್ರನಿಗೆ ವಿಡಿಯೋ ಕಾಲ್ ಮಾಡಿದ್ದು, ಅದರಲ್ಲಿ ದರ್ಶನ್ ತಮ ಮುಖ ತೋರಿಸಿ ವಿಶ್ ಮಾಡಿರುವುದು ಕಂಡುಬಂದಿದೆ. ದರ್ಶನ್ ಜೈಲಿನಲ್ಲಿ ಏಕಾಂಗಿಯಾಗಿದ್ದಾರೆ, ಪೌಷ್ಟಿಕ ಆಹಾರವಿಲ್ಲದೆ ಸೊರಗಿ ಸಣ್ಣಗಾಗಿದ್ದಾರೆ ಎಂದೆಲ್ಲ ವದಂತಿಗಳನ್ನು ಹರಿಯಬಿಡಲಾಗಿತ್ತು. ಈಗ ಬಿಡುಗಡೆಯಾಗಿರುವ ಫೋಟೋಗಳು ಅದೆಲ್ಲವನ್ನೂ ಸುಳ್ಳು ಎಂದು ತೋರಿಸಿದಂತಿದೆ.