ಬಳ್ಳಾರಿ ಸ್ಥಳಾಂತರ ವೇಳೆ ದರ್ಶನ್ ಕೂಲಿಂಗ್​ ಗ್ಲಾಸ್​ ಧರಿಸಿದ್ದ ವಿಚಾರ: ವರದಿ ನೀಡುವಂತೆ DIG ಆದೇಶ

ಬೆಳಗಾವಿ: ಬಳ್ಳಾರಿ ಜೈಲಿಗೆ ಸ್ಥಳಾಂತರವಾಗುವ ವೇಳೆ ನಟ ದರ್ಶನ್​ ಕೂಲಿಂಗ್ ಗ್ಲಾಸ್ ಧರಿಸಿದ್ದ ವಿಚಾರವಾಗಿ, ಸಂಬಂಧಿಸಿದ ಬೆಂಗಾವಲು ಪೊಲೀಸ್ ಪಡೆ ವಿರುದ್ಧ ಶಿಸ್ತುಕ್ರಮ ಸಂಬಂಧ ವರದಿ ಸಲ್ಲಿಸುವಂತೆ ಬಳ್ಳಾರಿ ಬಂಧಿಖಾನೆ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿಗೆ ಉತ್ತರ ವಲಯ ಕಾರಾಗೃಹಗಳ ಉಪ ಮಹಾನಿರೀಕ್ಷಕ ಟಿ.ಪಿ ಶೇಷ ಅವರು ಜ್ಞಾಪನಾ ಪತ್ರ ಬರೆದಿದ್ದಾರೆ.

ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಬಳ್ಳಾರಿ ಜೈಲಿಗೆ ತೆರಳುತ್ತಿರುವಾಗ ದರ್ಶನ್​ ಕೂಲಿಂಗ್​ ಗ್ಲಾಸ್​ ಧರಿಸಿರುವ ಬಗ್ಗೆ ಸುದ್ದಿ ವಾಹಿನಿಗಳಲ್ಲಿ ವರದಿ ಪ್ರಸಾರವಾಗಿದೆ. ಇದಕ್ಕೆ ಬೆಂಗಾವಲಿಗೆ ನಿಯೋಜಿತರಾದ ಪೊಲೀಸ್​ ಅಧಿಕಾರಿ ಹಾಗೂ ಸಿಬ್ಬಂದಿಯು ಅನುಮತಿಸಿರುವುದು ಕಂಡುಬಂದಿದೆ. ಇದರಿಂದಾಗಿ ದರ್ಶನ್​ಗೆ ಪೊಲೀಸರು ರಾಜಾತಿಥ್ಯ ನೀಡುತ್ತಿರುವುದಾಗಿ ಸಾರ್ವಜನಿಕರು ಹಾಗೂ ರಾಜ್ಯದ ಜನತೆಗೆ ತಪ್ಪು ಕಲ್ಪನೆಗಳು ಬಿಂಬಿತವಾಗುತ್ತಿದೆ. ಇದರಿಂದ ಇಲಾಖೆಯ ಘನತೆಗೆ ಧಕ್ಕೆ ಉಂಟಾಗಿದೆ ಎಂದು ಜ್ಞಾಪನಾ ಪತ್ರದಲ್ಲಿ ಡಿಐಜಿ ಟಿ.ಪಿ ಶೇಷ ತಿಳಿಸಿದ್ದಾರೆ.

ಬೆಂಗಾವಲಿಗೆ ನಿಯೋಜಿತರಾದ ಪೊಲೀಸ್​ ಅಧಿಕಾರಿ ಹಾಗೂ ಸಿಬ್ಬಂದಿಯು ದರ್ಶನ್​ ಅವರ ಸ್ವಂತ ವಸ್ತುಗಳನ್ನು ನಿಯಮಾನುಸಾರ ಕಾರಾಗೃಹದ ಮುಖ್ಯದ್ವಾರದಲ್ಲಿಯೇ ಒಪ್ಪಿಸಬೇಕು. ಆದರೆ, ಸಿಬ್ಬಂದಿಯು ನಿಯಮಬಾಹಿರವಾಗಿ ಕೂಲಿಂಗ್​ ಗ್ಲಾಸ್​ ಧರಿಸಲು ಅನುಮತಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಸೂಕ್ತ ಶಿಸ್ತುಕ್ರಮ ಜರುಗಿಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ಬಂಧಿಖಾನೆ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿಗೆ ಡಿಐಜಿ ಸೂಚಿಸಿದ್ದಾರೆ.

ಅಲ್ಲದೆ, ಬಳ್ಳಾರಿ ಜೈಲಿನಲ್ಲಿ ದರ್ಶನ್​ರನ್ನು ಹೇಗೆ ನೋಡಿಕೊಳ್ಳಬೇಕೆಂದು ಉತ್ತರ ವಲಯ ಕಾರಾಗೃಹಗಳ ಉಪಮಹಾನಿರೀಕ್ಷಕ ಟಿ.ಪಿ‌.ಶೇಷ ಜ್ಞಾಪನಾ ಪತ್ರದಲ್ಲಿ ತಿಳಿಸಿದ್ದಾರೆ. ದರ್ಶನವನ್ನು ಪ್ರತ್ಯೇಕ ಕೋಠಡಿಯಲ್ಲಿರುವುದು, ಈ ಕೊಠಡಿಗೆ 24*7 ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಇರಿಸಬೇಕು. ಪ್ರತಿನಿತ್ಯ ಸಿಸಿ ಕ್ಯಾಮರಾ ದೃಶ್ಯಾವಳಿ ಶೇಖರಿಸಬೇಕು. ದರ್ಶನ್​ ಇರುವ ಸೆಲ್‌ನ ಕರ್ತವ್ಯಕ್ಕೆ ಮುಖ್ಯವೀಕ್ಷಕ ಅಧಿಕಾರಿ ನಿಯೋಜಿಸಬೇಕು. ಈ ಸೆಲ್‌ಗೆ ಪ್ರತಿನಿತ್ಯ ಜೈಲರ್ ಭೇಟಿ ನೀಡಿ ಭದ್ರತೆ ಪರಿಶೀಲಿಸಬೇಕು ಎಂದು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *