‘ನೀವು ನನ್ನ ಶಕ್ತಿ’- ಡಿಸೆಂಬರ್ 11ಕ್ಕೆ ಡೆವಿಲ್ ರಿಲೀಸ್ – ಅಭಿಮಾನಿಗಳಲ್ಲಿ ಸಂಭ್ರಮ.
ಡಿಸೆಂಬರ್ 11ರಂದು ಅಂದರೆ ಗುರುವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಚಿತ್ರ ಬಿಡುಗಡೆ ಆಗುತ್ತಿರುವುದು ತಿಳಿದೇ ಇದೆ. ಇದರಿಂದ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಸಿನಿಮಾ ಬಿಡುಗಡೆಗೂ ಮೊದಲು ದರ್ಶನ್ ಅವರು ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ. ಇದನ್ನು ವಿಜಯಲಕ್ಷ್ಮೀ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ನನ್ನ ಹೃದಯದಿಂದ ಈ ಸಂದೇಶ ನಿಮಗೆ ಕಳುಹಿಸುತ್ತಿದ್ದೇನೆ. ವಿಜಿ ನಿಮ್ಮೆಲ್ಲರಿಗೂ ಇದನ್ನು ತಲುಪಿಸುತ್ತಾಳೆ. ನಿಮ್ಮೆಲ್ಲರ ಪ್ರೀತಿ, ಕಾಳಜಿ, ಬೆಂಬಲ, ನನ್ನ ಸಿನಿಮಾ ಪ್ರಚಾರ ಬಗ್ಗೆ ಪ್ರತಿ ಬಾರಿಯೂ ವಿಜಿ ನನಗೆ ತಿಳಿಸುತ್ತಿದ್ದಾಳೆ. ದೂರ ಇದ್ದರೂ ಪ್ರತಿ ಕ್ಷಣವೂ ನಿಮ್ಮ ಉಪಸ್ಥಿತಿಯನ್ನು ನಾನು ಅನುಭವಿಸುತ್ತೇನೆ. ನಾನು ನಿಮಗೆ ಹೇಳಲು ಬಯಸುವುದೇನೆಂದರೆ ದಯವಿಟ್ಟು ಯಾರು ಏನು ಹೇಳಿದರೂ ಚಿಂತಿಸಬೇಡಿ. ಯಾವುದೇ ವದಂತಿ, ನೆಗೆಟಿವಿಟಿ ನಿಮ್ಮ ಹೃದಯವನ್ನು ಅಲುಗಾಡಿಸಲು ಬಿಡಬೇಡಿ’ ಎಂದು ದರ್ಶನ್ ಕೋರಿದ್ದಾರೆ.
‘ನೀವು ನನ್ನ ಶಕ್ತಿ, ನೀವು ನನ್ನ ಕುಟುಂಬ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯಿಂದಾಗಿ ನಾನು ನಿಂತಿದ್ದೇನೆ. ನನ್ನ ಜೀವನದ ಈ ಹಂತದಲ್ಲಿ, ನನ್ನ ದೊಡ್ಡ ಶಕ್ತಿ ನೀವೇ. ಈ ಸಮಯದಲ್ಲಿ ನಾನು ಬಯಸುವುದು ಒಂದೇ . ನಮ್ಮ ಡೆವಿಲ್ ಸಿನಿಮಾ ಕಡೆಗೆ ಗಮನ ಹರಿಸಬೇಕು. ನನಗೆ ತೋರಿಸಿದ ಪ್ರೀತಿಯನ್ನು ಡೆವಿಲ್ಗೂ ತೋರಿಸಿ. ನನ್ನ ಅನುಪಸ್ಥಿತಿಯಲ್ಲಿಯೂ ಸಹ, ನೀವು ಪ್ರತಿಯೊಂದು ಪ್ರಶ್ನೆಗೆ, ಅನುಮಾನಕ್ಕೆ, ಧ್ವನಿಗೆ ಉತ್ತರಿಸಬೇಕೆಂದು ನಾನು ಬಯಸುತ್ತೇನೆ. ಪದಗಳಿಂದಲ್ಲ, ಆದರೆ ಈ ಚಿತ್ರದ ಅದ್ಭುತ ಯಶಸ್ಸಿನೊಂದಿಗೆ’ ಎಂದಿದ್ದಾರೆ ದರ್ಶನ್.
For More Updates Join our WhatsApp Group




