ದೆಹಲಿ : ದೆಹಲಿ ವಿಧಾನಸಭೆ ಚುನಾವಣೆ ದಿನಾಂಕ ಸಮೀಪ ಬಂದಾಗಲೇ ಆಮ್ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್ನ ನಡುವೆ ಮಾತಿನ ಚಕಮಕಿ ಜೋರಾಗಿದೆ. ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೊನೆಯ ಹಂತದ ಚುನಾವಣಾ ಪ್ರಚಾರಗಳು ಭರ್ಜರಿಯಾಗಿ ನಡೆದಿವೆ. ಇದರ ನಡುವೆ ಆಮ್ ಆದ್ಮಿ ಪಾರ್ಟಿಯು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದಂತೆ ಎಚ್ಚರಿಕೆಯ ಸಂದೇಶವೊಂದನ್ನು ದೆಹಲಿಯ ಮತದಾರರಿಗೆ ಕೊಟ್ಟಿದೆ. ಇದು ಎಎಪಿ ಹಾಗೂ ಕಾಂಗ್ರೆಸ್ನ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಎಎಪಿಯ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯಂತೆಯೇ ಕುತಂತ್ರಿ ಅಂತ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ನೀವು ಕಾಂಗ್ರೆಸ್ಗೆ ಮತ ಚಲಾಯಿಸಿದರೆ ಅದರ ನೇರ ಲಾಭವಾಗುವುದು ಬಿಜೆಪಿಗೆ ಎಂದು ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.
ಅಲ್ಲದೆ ಮುಂದೆ ಜನ ಸೌಲಭ್ಯ ಕಳೆದುಕೊಳ್ಳಲಿದ್ದಾರೆ ಎನ್ನುವ ಎಚ್ಚರಿಕೆಯನ್ನು ಸಹ ಕೊಟ್ಟಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ದೆಹಲಿಯ ವಿಧಾನಸಭೆ ಚುನಾವಣೆ ಫೆಬ್ರವರಿ 5ಕ್ಕೆ ಪ್ರಕಟವಾಗಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ಭರ್ಜರಿ ಚುನಾವಣೆ ಪ್ರಚಾರವನ್ನು ನಡೆಸುತ್ತಿವೆ. ಈ ಬಾರಿಯ ಚುನಾವಣೆ ಹಲವು ಕಾರಣಕ್ಕೆ ವಿಶೇಷವಾಗಿದೆ. ದೆಹಲಿ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಸಹ ಸ್ವತಂತ್ರ್ಯವಾಗಿ ಸ್ಪರ್ಧೆ ಮಾಡುತ್ತಿವೆ. 10 ವರ್ಷಗಳಿಂದ ಭರ್ಜರಿ ಆಡಳಿತ ಮಾಡಿದ್ದ ಎಎಪಿಯು ದೆಹಲಿಯಲ್ಲಿ ಹ್ಯಾಟ್ರಿಕ್ ವಿಜಯದ ಕನಸು ಕಾಣುತ್ತಿದೆ. ಆದರೆ, ದೆಹಲಿ ಗದ್ದುಗೆ ಹೇರುವುದು ಅಷ್ಟೊಂದು ಸುಲಭವಾಗಿಲ್ಲ.
ಈ ಚುನಾವಣೆಯಲ್ಲಿ ನೀವೇನಾದರೂ ಕಾಂಗ್ರೆಸ್ಗೆ ಮತಚಲಾಯಿಸಿದರೆ ಅದರ ನೇರ ಲಾಭ ಬಿಜೆಪಿಗೆ ಆಗಲಿದೆ ಅಂತ ಅರವಿಂದ್ ಕೇಜ್ರಿವಾಲ್ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಆ ಹಳೆಯ ಪಕ್ಷಕ್ಕೆ ನೀವು ಮತ ಹಾಕಿದರೆ ಅದರ ಎಲ್ಲಾ ಲಾಭ ಬಿಜೆಪಿಗೆ ಸೇರಲಿದೆ. ದೆಹಲಿಯಲ್ಲಿ ಜಾರಿ ಮಾಡಲಾಗಿರುವ ವಿಶೇಷ ಕಲ್ಯಾಣ ಯೋಜನೆಗಳು ಮುಂದುವರಿಯಬೇಕು ಎನ್ನುವ ಆಸೆ ನಿಮಗೆ ಇದ್ದರೆ ನೀವು ತಪ್ಪದೆ ಎಎಪಿಗೇ ಮತ ಚಲಾಯಿಸಿ ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಕಾಂಗ್ರೆಸ್ಗೆ ಯಾವುದೇ ಉಳಿಗಾಲವಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಕಾಂಗ್ರೆಸ್ ಗೆಲ್ಲಬೇಕು ಎಂದು ಪ್ರಯತ್ನಿಸುತ್ತಿದ್ದರೆ. ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ನಾಯಕರು ಕಾಂಗ್ರೆಸ್ ಸೋಲಬೇಕು ಅಂತ ಕೆಲಸ ಮಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಮುಂದುವರಿದು ದೆಹಲಿಯಲ್ಲಿ ಎಎಪಿ ಪಕ್ಷವನ್ನು ಸೋಲಿಸುವುದಕ್ಕೆ ಬೇಕಾದ ಎಲ್ಲಾ ಕೆಲಸಗಳನ್ನೂ ಕಾಂಗ್ರೆಸ್ ಮಾಡುತ್ತಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷವು ಬಿಜೆಪಿಯೊಂದಿಗೆ ಕೆಲಸ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.
ಸೌಲಭ್ಯ ನಿಲ್ಲಲಿದೆ ಎಚ್ಚರಿಕೆ ಎಂದ ಎಎಪಿ ಇನ್ನು ದೆಹಲಿಯಲ್ಲಿ ಎಎಪಿ ಪಕ್ಷವನ್ನು ಹೊರತುಪಡಿಸಿ ಕಾಂಗ್ರೆಸ್ ಇಲ್ಲವೇ ಬಿಜೆಪಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸೌಲಭ್ಯಗಳು ನಿಲ್ಲಲಿವೆ ಎಂದು ಅರವಿಂದ್ ಕೇಜ್ರಿವಾಲ್ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ಒಂದೊಮ್ಮೆ ನೀವು ಕಾಂಗ್ರೆಸ್ಗೆ ಮತ ಹಾಕಿದರೆ. ಅದರ ನೇರ ಲಾಭ ಬಿಜೆಪಿಗೆ ಆಗಲಿದೆ. ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ನಿಮಗೆ ಎಎಪಿ ಸರ್ಕಾರದಿಂದ ಸಿಗುತ್ತಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ನಿಲ್ಲಿಸಲಾಗುತ್ತದೆ. ನೀವು ಪ್ರತಿ ತಿಂಗಳು ಕನಿಷ್ಠ ಮೊತ್ತವನ್ನೂ ಉಳಿಸುವುದಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ.