ದೆಹಲಿ: ದೇಶದ ಪ್ರಮುಖ ಕೇಂದ್ರಾಡಳಿತ ಪ್ರದೇಶ ಹಾಗೂ ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಆಮ್ ಆದ್ಮಿ ಪಾರ್ಟಿಯು ಬಂಪರ್ ಪ್ಲಾನ್ವವೊಂದನ್ನು ಮಾಡಿದೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮಹಿಳಾ ಮತದಾರರಿಗೆ ನೀಡುವ ಗೃಹಲಕ್ಷ್ಮಿ ಮಾದರಿಯ ಹಣವನ್ನು ಹೆಚ್ಚಿಸುವುದಾಗಿ ಹೇಳಿದೆ. ದೆಹಲಿಯಲ್ಲಿ ಅರ್ಹ ಮಹಿಳೆಯರಿಗೆ ಎಎಪಿ ಸರ್ಕಾರವು ಈಗಾಗಲೇ 1,000 ಸಾವಿರ ರೂಪಾಯಿ ನೀಡುತ್ತಿದೆ. ಮುಂದೆ ಅಧಿಕಾರಕ್ಕೆ ಬಂದರೆ ಈ ಮೊತ್ತವನ್ನು ಬರೋಬ್ಬರಿ 2100 ರೂಪಾಯಿ ಹೆಚ್ಚಳ ಮಾಡುವುದಾಗಿ ಎಎಪಿ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಘೋಷಿಸಿದ್ದಾರೆ.
ದೆಹಲಿಯ ವಿಧಾನಸಭೆ ಚುನಾವಣೆಯು 2025ನೇ ಸಾಲಿನ ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆ ಇದೆ. ದೆಹಲಿ ಚುನಾವಣೆ ಕಣ ಈಗಾಗಲೇ ರಂಗೇರಿದೆ. ಸಾಲು ಸಾಲು ಚುನಾವಣೆಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯು ದೆಹಲಿಯಲ್ಲೂ ಗೆಲ್ಲಬೇಕು ಎಂದು ಪಣತೊಟ್ಟಿದೆ. ಆದರೆ, ಎಎಪಿಗೆ ಇದು ತನ್ನ ಅಸ್ತಿತ್ವದ ಪ್ರಶ್ನೆಯಾಗಿದೆ. ಹೀಗಾಗಿ, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಇದೆ. ಹೀಗಾಗಿ, ಈ ಬಾರಿಯ ಚುನಾವಣೆಯಲ್ಲಿ ದೆಹಲಿ ಮತದಾರರಿಗೆ ಭರ್ಜರಿ ಗಿಫ್ಟ್ ಕೊಡುತ್ತಿದೆ. ಇದೀಗ ಈಗಾಗಲೇ ಇರುವ ಯೋಜನೆಯನ್ನು ವಿಸ್ತರಿಸುವುದಾಗಿ ಘೋಷಿಸಿದೆ.
ನಾಳೆಯಿಂದಲೇ ನೋಂದಣಿ ಪ್ರಾರಂಭ: ಇನ್ನು ಈ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ನಾಳೆಯಿಂದಲೇ ಪ್ರಾರಂಭಿಸುವುದಾಗಿ ಆಡಳಿತರೂಢ ಎಎಪಿ ಹೇಳಿದೆ. ಆದರೆ, ಈ ಯೋಜನೆ ಜಾರಿಯಾಗುವುದು ಮುಂದೆ ಎಎಪಿ ಅಧಿಕಾರಕ್ಕೆ ಬಂದರೆ ಮಾತ್ರ. ಎರಡು ವಾರಗಳಲ್ಲಿ ದೆಹಲಿ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ.
ಹೀಗಾಗಿ, ಈಗಲೇ ಪ್ರಮುಖ ಘೋಷಣೆಯನ್ನು ಎಎಪಿ ಘೋಷಿಸಿ, ರಿಜಿಸ್ಟ್ರೇಷನ್ ಸಹ ಪ್ರಾರಂಭಿಸಿದೆ. ಈ ಬಾರಿ ದೆಹಲಿಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ಇದೆ. ಎಎಪಿಯ ಮೇಲೆ ಭ್ರಷ್ಟಾಚಾರ ಆರೋಪ ಹಾಗೂ ಆಡಳಿತ ವಿರೋಧ ಅಲೆಯೂ ಇದೆ. ಮದ್ಯ ನೀತಿ ಹಗರಣದಲ್ಲಿ ಸಾಲು ಸಾಲು ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೈಲು ಸೇರಿದ್ದರು. ಇದೀಗ ಚುನಾವಣೆ ಸಮೀಪಿಸುತ್ತಿದ್ದು, ಈ ವಿಷಯಗಳು ಎಎಪಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಕುತೂಹಲವಿದೆ.
ಬಿಜೆಪಿ ವಿರುದ್ಧ ವಾಗ್ದಾಳಿ: ಇದೇ ಸಂದರ್ಭದಲ್ಲಿ ಎಎಪಿಯು ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದೆ. ಅಲ್ಲದೆ ಈಗ 1,000 ಸಾವಿರ ರೂಪಾಯಿ ಮಹಿಳೆಯರಿಗೆ ನೀಡಲಾಗುತ್ತಿದೆ. ಆದರೆ, ಈ ಹಣದುಬ್ಬರದ ಪರಿಸ್ಥಿತಿಯಲ್ಲಿ 1 ಸಾವಿರ ರೂಪಾಯಿ ಯಾವುದಕ್ಕೂ ಸಾಲುವುದಿಲ್ಲ. ಹೀಗಾಗಿ, ಇದನ್ನು 2,100 ರೂಪಾಯಿಗೆ ಹೆಚ್ಚಳ ಮಾಡುವುದಕ್ಕೆ ನಿರ್ಧರಿಸುವುದಾಗಿ ಎಎಪಿ ಹೇಳಿದೆ. ದೆಹಲಿ ವಿಧಾನಸಭೆಯು 70 ಶಾಸಕರ ಸದಸ್ಯ ಬಲವನ್ನು ಹೊಂದಿದೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಬರೋಬ್ಬರಿ 62 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಎಎಪಿಗೆ ಸಾಕಷ್ಟು ಸವಾಲುಗಳು ಇವೆ. ಅಲ್ಲಿ ಆಡಳಿತ ವಿರೋಧ ಅಲೆ ಇದೆ ಎನ್ನಲಾಗಿದ್ದು, ಇದನ್ನು ಎಎಪಿ ಯಾವ ರೀತಿ ಎದುರಿಸಲಿದೆ ಎನ್ನುವ ಕುತೂಹಲ ಎದುರಾಗಿದೆ.