ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಮೈಸೂರು ಚಲೋ ಪಾದಯಾತ್ರೆ ಸಫಲವಾದ ಬೆನ್ನಲ್ಲೇ ಸಿಎಂ ರಾಜೀನಾಮೆವರೆಗೂ ವಿರಮಿಸದೆ, ಅವಿರತ ಹೋರಾಟಕ್ಕೆ ಬಿಜೆಪಿ ನಾಯಕರು ಸಜ್ಜಾಗಿದ್ದಾರೆ. ಮಿತ್ರಪಕ್ಷ ಜೆಡಿಎಸ್ ಸಾಥ್ ಪಡೆದುಕೊಂಡೇ ಹೋರಾಟಕ್ಕೆ ಕೇಸರಿ ಪಡೆ ನಿರ್ಧರಿಸಿದೆ.
ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಾಯಕರು ಬೆಂಗಳೂರಿನಿಂದ ಮೈಸೂರಿಗೆ ನಡೆಸಿದ ಪಾದಯಾತ್ರೆ ಫಲಪ್ರದವಾಗಿರುವುದಕ್ಕೆ ಬಿಜೆಪಿ ಹೈಕಮಾಂಡ್ ನಾಯಕರು ಸಂತಸಗೊಂಡಿದ್ದಾರೆ. ಸಿಎಂ ರಾಜೀನಾಮೆವರೆಗೂ ಹೋರಾಟ ಕೈಬಿಡದಂತೆ ಸೂಚಿಸಿದ್ದಾರೆ. ಅದರಂತೆ ಮತ್ತೊಮ್ಮೆ ಬಿಜೆಪಿ – ಜೆಡಿಎಸ್ ಜಂಟಿ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ.
ಅಧಿವೇಶನ ನಡೆಯುವ ವೇಳೆಯಲ್ಲಿಯೇ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದ್ದ ಬಿಜೆಪಿ-ಜೆಡಿಎಸ್ ಶಾಸಕರು, ಇದೀಗ ಮತ್ತೊಮ್ಮೆ ಅದೇ ಗಾಂಧಿ ಪ್ರತಿಮೆ ಎದುರು ಧರಣಿ ಮೂಲಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಹೋರಾಟ ಗಾಂಧಿ ಪ್ರತಿಮೆಗೆ ಸೀಮಿತವಾಗದೆ, ರಾಜ್ಯಾದ್ಯಂತ ನಡೆಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ.
ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದು ಬಿಜೆಪಿ, ಜೆಡಿಎಸ್ ಹೋರಾಟಕ್ಕೆ ಸಿಕ್ಕ ಮೊದಲ ಮುನ್ನಡೆಯಾಗಿದೆ. ಇದನ್ನು ಸಿಎಂ ರಾಜೀನಾಮೆವರೆಗೂ ಮುಂದುವರೆಸಿಕೊಂಡು ಹೋಗುವ ಯೋಜನೆ ರೂಪಿಸಲಾಗಿದೆ. ಹೋರಾಟಕ್ಕೆ ಬಿಜೆಪಿ ಹೈಕಮಾಂಡ್ ನಾಯಕರೇ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮೋದಿ ಸಂಪುಟ ಸದಸ್ಯರಾಗಿರುವ ಕುಮಾರಸ್ವಾಮಿ ಬಿಜೆಪಿಯ ಈ ಹೋರಾಟಕ್ಕೆ ಸಾಥ್ ನೀಡಲು ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದಾರೆ. ಹಾಗಾಗಿಯೇ, ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ನಡೆಯಲಿರುವ ಬಿಜೆಪಿ ಪ್ರತಿಭಟನೆಯಲ್ಲಿ ಜೆಡಿಎಸ್ ಶಾಸಕರೂ ಪಾಲ್ಗೊಳ್ಳಲು ನಿರ್ಧಾರ ಮಾಡಿದ್ದಾರೆ.
ಇದು ಸಿಎಂ ರಾಜೀನಾಮೆಗೆ ಆಗ್ರಹಿಸಿ ನಡೆಸುತ್ತಿರುವ ಎರಡನೇ ಹಂತದ ಹೋರಾಟವಾಗಿದೆ. ಪಾದಯಾತ್ರೆಯ ನಂತರದ ಮೊದಲ ಹೋರಾಟವಾಗಿದ್ದು, ಇದನ್ನು ಅಭಿಯಾನದ ರೀತಿಯಲ್ಲಿ ಕೊಂಡೊಯ್ಯಲು ಕೇಸರಿ ಪಡೆ ನಿರ್ಧರಿಸಿದೆ. ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸಿಎಂ ಹೈಕೋರ್ಟ್ ಮೊರೆ ಹೋಗಲಿದ್ದಾರೆ. ಹೈಕೋರ್ಟ್ ತೀರ್ಪು ನೋಡಿಕೊಂಡು ಬಿಜೆಪಿ ನಾಯಕರು ಮುಂದಿನ ಹೋರಾಟದ ಸ್ವರೂಪವನ್ನು ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ.