Mantralaya || ಗುರುರಾಘವೇಂದ್ರ ಸ್ವಾಮಿ 353ನೇ ಆರಾಧನಾ ಮಹೋತ್ಸವಕ್ಕೆ‌ ಚಾಲನೆ | Raghavendra Swamy Aradhana

Raghavendra Swamy Aradhana

Raghavendra Swamy Aradhana

ರಾಯಚೂರು: ತುಂಗಾ ತೀರದಲ್ಲಿ‌ ನೆಲೆಸಿರುವ ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷವೆಂದೇ ಜನಮನ್ನಣೆ ಪಡೆದ ಮಂತ್ರಾಲಯ ಶ್ರೀ ಗುರುರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವಕ್ಕೆ‌ ಅದ್ಧೂರಿ ಚಾಲನೆ ಸಿಕ್ಕಿದೆ. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥಸ್ವಾಮೀಜಿಯವರು ಧ್ವಜಾರೋಹಣ ನೇರವೇರಿಸಿ, ರಾಯರ 7 ದಿನಗಳ ಆರಾಧನೆಗೆ ಚಾಲನೆ ನೀಡಿದರು.

ಗೋ, ಗಜ, ಅಶ್ವ, ಒಂಟೆ ಧಾನ್ಯ ಪೂಜೆಗಳೊಂದಿಗೆ ಆರಾಧನೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಆರಾಧನೆಯು ಆಗಸ್ಟ್ 18ರಿಂದ 24ರ ವರೆಗೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಮಠದ ಆವರಣವು ತಳಿರು ತೋರಣ, ಹೂವಿನ ಅಲಂಕಾರ, ಝಗಮಗಿಸುವ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.

ರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ವೃಂದಾವನಸ್ಥರಾಗಿ 353 ವರ್ಷಗಳು ಸಂದ ಹಿನ್ನೆಲೆಯಲ್ಲಿ ಆರಾಧನಾ ಮಹೋತ್ಸವವನ್ನು 7 ದಿನಗಳ ಕಾಲ ಸಪ್ತರಾತ್ರೋತ್ಸವವಾಗಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಆಗಸ್ಟ್ 20ರಂದು ಪೂರ್ವಾರಾಧನೆ, 21ರಂದು ಮಧ್ಯಾರಾಧನೆ, ಆಗಸ್ಟ್ 23ರಂದು ಉತ್ತರಾರಾಧನೆ ನಡೆಯಲಿದೆ.

ಉತ್ತರಾರಾಧನೆ ದಿನ ಮಠದ ರಥಬೀದಿಯಲ್ಲಿ ಮಹಾರಥೋತ್ಸವ ಜರುಗಲಿದೆ. 7 ದಿನಗಳವರೆಗೆ ಪ್ರತಿನಿತ್ಯ ಮಠದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಆರಾಧನೆ ವೇಳೆ ಮಂತ್ರಾಲಯದೆಲ್ಲೆಡೆ ರಾಯರ ನಾಮಸ್ಮರಣೆ ಅನುರಣಿಸಲಿದೆ. ದೇಶ, ವಿದೇಶ ಹಾಗೂ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

Leave a Reply

Your email address will not be published. Required fields are marked *