ಸ್ಥಿರಾಸ್ತಿಗಳ ನೆಲಸಮ – ದೇಶಕ್ಕೆಲ್ಲ ಒಂದೇ ನಿಯಮ : ಸುಪ್ರೀಂ ಕೋರ್ಟ್

ಕರ್ನಾಟಕಕ್ಕೆ ಸುಪ್ರೀಂ ನಿರ್ಬಂಧ : ಅರ್ಧವಾರ್ಷಿಕ ಪರೀಕ್ಷೆಗಳ ಫಲಿತಾಂಶ ತಡೆ

ನವದೆಹಲಿ: ಅನಧಿಕೃತವಾಗಿ ಯಾವುದೇ ವ್ಯಕ್ತಿ ನಿರ್ಮಾಣ ಮಾಡಿರುವ ಕಟ್ಟಡವನ್ನು ಆತನ ಧರ್ಮ ಅಥವಾ ನಂಬಿಕೆಗಳನ್ನು ಲೆಕ್ಕಿಸದೇ ನೆಲಸಮ ಮಾಡಬೇಕು. ಈ ಕುರಿತಂತೆ ದೇಶಕ್ಕೆಲ್ಲ ಅನ್ವಯವಾಗುವಂತೆ ಸಮಗ್ರ ಮಾರ್ಗಸೂಚಿಗಳನ್ನು ಜಾರಿಮಾಡಲಾಗುವುದು’ ಎಂದು ನ್ಯಾಯಮೂರ್ತಿ ಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಮಂಗಳವಾರ ಹೇಳಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಿರಾಸ್ತಿಗಳ ನೆಲಸಮ ಮತ್ತು ರಸ್ತೆಗಳ ನಡುವೆ ಇರುವ ದರ್ಗಾ ಅಥವಾ ದೇವಸ್ಥಾನ ಸೇರಿದಂತೆ ಯಾವುದೇ ಧಾರ್ಮಿಕ ಕಟ್ಟಡವನ್ನು ನೆಲಸಮಗೊಳಿಸುವ ಕುರಿತಂತೆ ಮಾರ್ಗಸೂಚಿ ರಚನೆ ಬಗ್ಗೆ ಸುಪ್ರೀಂ ಕೋರ್ಟ್ ಈ ಸ್ಪಷ್ಟನೆ ನೀಡಿದೆ. ಯಾವುದೇ ಒಬ್ಬ ಆರೋಪಿ ಅಥವಾ ಪ್ರಕರಣದಲ್ಲಿ ದೋಷಿ ಎಂಬ ಕಾರಣಕ್ಕೆ ಅವರ ಕಟ್ಟಡ ನೆಲಸಮ ಮಾಡುವುದು ಸೂಕ್ತ ಕಾರಣವಲ್ಲ ಎಂದಿರುವ ನ್ಯಾಯಾಲಯವು, ವಿವಿಧ ರಾಜ್ಯಗಳಲ್ಲಿ ಆರೋಪಿಗಳ ಸ್ಥಿರಾಸ್ತಿಗಳನ್ನು ಕೆಡವಲಾಗಿದೆ ಎಂದು ಸಲ್ಲಿಸಲಾಗಿರುವ ಹಲವು ಅರ್ಜಿಗಳ ಕುರಿತಾದ ತೀರ್ಪನ್ನು ಕಾಯ್ದಿರಿಸಿದೆ.

ಸುಪ್ರೀಂ ಕೋರ್ಟ್ ಅನುಮತಿ ಇಲ್ಲದೆ ಸ್ಥಿರಾಸ್ತಿ ನೆಲಸಮಕ್ಕೆ ತಡೆ ಮುಂದುವರಿಕೆ, ಅಕ್ಟೋಬರ್ 1ರವರೆಗೆ ತನ್ನ ಅನುಮತಿ ಇಲ್ಲದೆ ಯಾವುದೇ ಕಟ್ಟಡ ನೆಲಸಮ ಮಾಡಬಾರದು ಎಂದು ಸೆಪ್ಟೆಂಬರ್ 17ರಂದು ಆದೇಶಿಸಿದ್ದ ನ್ಯಾಯಪೀಠ, ಪ್ರಕರಣದ ವಿಚಾರಣೆ ಅಂತ್ಯಗೊಳ್ಳುವವರೆಗೂ ಆದೇಶ ಮುಂದುವರಿಯಲಿದೆ ಎಂದು ಹೇಳಿದೆ.

ನಮ್ಮದು ಜಾತ್ಯತೀತ ದೇಶ, ದೇಶದ ಎಲ್ಲ ನಾಗರಿಕರು, ಸಂಸ್ಥೆಗಳಿಗೆ ಮಾರ್ಗಸೂಚಿ ರೂಪಿಸುತ್ತಿದ್ದೇವೆಯೇ ಹೊರತು ಯಾವುದೇ ಒಂದು ನಿರ್ದಿಷ್ಟ ಸಮುದಾಯಕಲ್ಲ. ರಸ್ತೆಯ ಮಧ್ಯೆ ಇರುವ ಯಾವುದೇ ದರ್ಗಾ ಅಥವಾ ದೇಗುಲ ಆಗಿದ್ದರೂ ಸರಿ ಅದನ್ನು ನೆಲಸಮ ಮಾಡಬೇಕೆಂದು ವಿಚಾರಣೆಯ ಮೊದಲ ದಿನದಿಂದಲೂ ಹೇಳುತ್ತಿದ್ದೇವೆ. ಸಾರ್ವಜನಿಕರ ಸುರಕ್ಷತೆ ಮತ್ತು ಸಾರ್ವಜನಿಕರ ಹಿತಾಸಕ್ತಿ ಅತ್ಯಂತ ಪ್ರಮುಖ’ ಎಂದು ಪೀಠ ಹೇಳಿದೆ.

ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಭಿನ್ನ ಕಾನೂನು ಇರಬಾರದು ಎಂಬುದನ್ನು ನ್ಯಾಯಪೀಠ ಪರಿಗಣಿಸಿದೆ.’ಯಾರೋ ಒಬ್ಬ ಆರೋಪಿ ಅಥವಾ ಶಿಕ್ಷೆಗೊಳಗಾಗಿದ್ದಾರೆ ಎಂಬುದು ಅವರ ಕಟ್ಟಡ ನೆಲಸಮಕ್ಕೆ ಸೂಕ್ತ ಕಾರಣವಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತಿದ್ದೇವೆ’ಎಂದಿದೆ. ಯಾವುದೇ ಒತ್ತುವರಿಯನ್ನು ನ್ಯಾಯಪೀಠ ರಕ್ಷಿಸುವುದಿಲ್ಲ ರಸ್ತೆ, ಫುಟ್‌ಪಾತ್, ಸರ್ಕಾರಿ ಭೂಮಿ, ಅರಣ್ಯ, ನೀರಿನ ತಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳ ಯಾವುದೇ ಒತ್ತುವರಿಯನ್ನು ನ್ಯಾಯಪೀಠ ರಕ್ಷಿಸುವುದಿಲ್ಲ. ನಾವು ನೀಡುವ ನಿರ್ದೇಶನಗಳು ದೇಶಕ್ಕೆಲ್ಲ ಅನ್ವಯವಾಗಲಿವೆ. ನಮ್ಮ ಆದೇಶಗಳು ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡವರಿಗೆ ಅನುಕೂಲ ಮಾಡಿಕೊಡುವುದಿಲ್ಲ ಎಂಬುದರ ಕುರಿತಂತೆ ಎಚ್ಚರ ವಹಿಸುತ್ತೇವೆ ಎಂದು ಪೀಠ ಹೇಳಿದೆ.

ಒತ್ತುವರಿ ತೆರವು ಕಾರ್ಯಾಚರಣೆಗಾಗಿ ರಿಜಿಸ್ಟ್ರಾರ್ ಪೋಸ್ಟ್ ಮೂಲಕ ನೋಟಿಸ್ ಕಳುಹಿಸಲಾಗಿದೆ. ಅವುಗಳನ್ನು ಆನ್‌ಲೈನ್‌ನಲ್ಲೂ ಪ್ರದರ್ಶಿಸಬೇಕು. ಇದು ಡಿಜಿಟಲ್ ದಾಖಲೆಯಾಗಲಿದೆ ಎಂದು ನ್ಯಾಯಪೀಠ ಹೇಳಿದೆ.

Leave a Reply

Your email address will not be published. Required fields are marked *