ಬೆಂಗಳೂರು: ವಿಧಾನಸಭೆಯಲ್ಲಿಂದು ಧರ್ಮಸ್ಥಳ ಪ್ರಕರಣ ಪ್ರತಿಧ್ವನಿಸಿ ಗದ್ದಲಕ್ಕೆ ಕಾರಣವಾಯ್ತು. ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ಪ್ರಸ್ತಾಪಿಸಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು.
ತನಿಖೆಗೆ ನಮ್ಮ ಆಕ್ಷೇಪ ಇಲ್ಲ. ಆದ್ರೆ ಹಿಂದೂ ಧಾರ್ಮಿಕ ಕೇಂದ್ರ ಟಾರ್ಗೆಟ್ ಮಾಡಲಾಗಿದೆ. ಅಪಪ್ರಚಾರ ನಡೆಯುತ್ತಿದೆ. ಅನಾಮಿಕ, ಐದು ಗುಂಡಿ, ಹತ್ತು ಗುಂಡಿ ಅಂತ ಹೇಳ್ತಾ 13 ಗುಂಡಿ ಆಗಿದೆ. ಊಹಾಪೋಹಗಳಿಗೆ ಸರ್ಕಾರ ತೆರೆ ಎಳೆಯಬೇಕು. ಧಾರ್ಮಿಕ ನಂಬಿಕೆ ಮೇಲೆ ಅಪಪ್ರಚಾರ ಮಾಡ್ತಿರುವವರ ಮೇಲೆ ಕ್ರಮ ಆಗಬೇಕು. ತನಿಖೆ ಎಲ್ಲಿವರೆಗೆ ಬಂದಿದೆ? ಇನ್ನೆಷ್ಟು ಗುಂಡಿ ತೆಗಿಯುತ್ತೀರಾ? ಅಂತ ಗೃಹ ಸಚಿವರು ಸ್ಪಷ್ಟನೆ ಕೊಡಬೇಕು ಅಂತಾ ಸುನೀಲ್ ಕುಮಾರ್ (Sunil Kumar) ಆಗ್ರಹಿಸಿದ್ರು.
ಈ ವೇಳೆ ಉತ್ತರ ಕೊಟ್ಟ ಗೃಹ ಸಚಿವ ಪರಮೇಶ್ವರ್ (Parameshwar), ತನಿಖೆ ನಡೆಯುತ್ತಿದೆ, ತನಿಖೆ ಮಧ್ಯೆ ನಾವು ಮಧ್ಯ ಪ್ರವೇಶ ಮಾಡಲ್ಲ. ತನಿಖೆ ಒಂದು ಹಂತಕ್ಕೆ ಬಂದ ನಂತರ ವರದಿ ಕೊಡ್ತಾರೆ. ವರದಿ ಕೊಟ್ಟ ನಂತರ ನಾನು ಪೂರ್ಣ ಉತ್ತರ ಕೊಡ್ತೇನೆ ಅಂದ್ರು. ಆದರೆ ಪರಮೇಶ್ವರ್ ಉತ್ತರಕ್ಕೆ ಬಿಜೆಪಿ ಸದಸ್ಯರು ಒಗ್ಗಟ್ಟಾಗಿ ವಿರೋಧ ವ್ಯಕ್ತಪಡಿಸಿ, ಸ್ಪಷ್ಟೀಕರಣ ಕೊಡಬೇಕು, ಇನ್ನೂ ಎಷ್ಟು ಗುಂಡಿ ಅಗೆಯುತ್ತೀರಾ ಹೇಳಿ? ಅಪಪ್ರಚಾರ ನಿಲ್ಲಿಸಿ, ಸುಳ್ಳುಪ್ರಚಾರ ಇದು, ಪ್ರಕರಣದ ಚರ್ಚೆಗೆ ಅವಕಾಶ ಕೊಡಿ ಅಂತ ಬಿಜೆಪಿ ಸದಸ್ಯರು ಆಗ್ರಹಿಸಿದ್ರು.
ಆಗ ಸದನದಲ್ಲಿ ಧರ್ಮಸ್ಥಳ ಗದ್ದಲ ಜೋರಾಯ್ತು. ಮಧ್ಯಪ್ರವೇಶ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ನಾವು ಯಾರ ಪರವೂ ಇಲ್ಲ, ನಾವು ಸತ್ಯದ ಪರ ಅಂದ್ರು. ಚರ್ಚೆಗೆ ಈಗ ಅವಕಾಶ ಕೊಡಿ ಅಂತಾ ಆರ್.ಅಶೋಕ್ ಆಗ್ರಹಿಸಿದ್ರೆ, ಮಧ್ಯಂತರ ವರದಿ ಪಡೆದುಕೊಂಡು ಕ್ಲಾರಿಟಿ ಕೊಡಿ. ಇನ್ನೊಬ್ಬ ಬಂದು ಗುಂಡಿ ಅಗೆಯಬೇಕು ಅಂತಾನೆ, ಅಗೆಯುತ್ತೀರಾ? ಅಂತಾ ಸುನೀಲ್ ತಿರುಗೇಟು ನೀಡಿದ್ರು.
ಮತ್ತೆ ಉತ್ತರ ಕೊಟ್ಟ ಪರಮೇಶ್ವರ್, ಎಸ್‌ಐಟಿ ತನಿಖೆ ಮುಗಿಯುವವರೆಗೂ ನಾವು ಮಧ್ಯಪ್ರವೇಶ ಮಾಡಲ್ಲ, ತನಿಖೆ ನಂತರ ವರದಿ ಪಡೆಯುತ್ತೇವೆ ಅಂತಾ ಸ್ಪಷ್ಟನೆ ಕೊಟ್ಟರು. ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಮನವಿ ಮಾಡಿದ್ದು, ನಾಳೆ, ನಾಡಿದ್ದು ಕಲಾಪದಲ್ಲಿ ಚರ್ಚೆಗೆ ಅವಕಾಶ ಸಿಗುತ್ತಾ ಎಂಬುದನ್ನ ಕಾದುನೋಡಬೇಕಿದೆ.
For More Updates Join our WhatsApp Group :




