ಧರ್ಮಸ್ಥಳ ಪ್ರಕರಣ: ಎಫ್ಎಸ್ಎಲ್ ವರದಿ ಬಂದ ನಂತರ ಮತ್ತೆ ಮೂಳೆಗಾಗಿ ಶೋಧ ಸಾಧ್ಯತೆ. | Dharmasthala CASE

ಧರ್ಮಸ್ಥಳ ಪ್ರಕರಣ: ಎಫ್ಎಸ್ಎಲ್ ವರದಿ ಬಂದ ನಂತರ ಮತ್ತೆ ಮೂಳೆಗಾಗಿ ಶೋಧ ಸಾಧ್ಯತೆ. | Dharmasthala CASE

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿದ್ದಾಗಿ ಅನಾಮಿಕ ನೀಡಿದ ದೂರಿನ ಆಧಾರದಲ್ಲಿ 16 ದಿನ 17 ಪಾಯಿಂಟ್ಗಳಲ್ಲಿ ಅಗೆದಿದ್ದ ಎಸ್ಐಟಿ ತಂಡಕ್ಕೆ ಎರಡು ಕಡೆ ಮಾತ್ರ ಅಸ್ಥಿಪಂಜರದ ಕುರುಹು ಸಿಕ್ಕಿತ್ತು. ನಂತರ ಧರ್ಮಸ್ಥಳ ಪ್ರಕರಣ ವಿಧಾನಸಭೆ ಕಲಾಪದಲ್ಲೂ ಸದ್ದು ಮಾಡಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು. ಸದನದಲ್ಲಿ ಸೋಮವಾರ ಉತ್ತರ ನೀಡಿದ ಗೃಹಸಚಿವ ಡಾ. ಜಿ ಪರಮೇಶ್ವರ್, ಸದ್ಯಕ್ಕೆ ತಾತ್ಕಾಲಿಕವಾಗಿ ಶೋಧ ಕಾರ್ಯ ಸ್ಥಗಿತಗೊಳಿಸಿದ್ದೇವೆ ಎಂದಿದ್ದಾರೆ.

ಸದ್ಯ ಧರ್ಮಸ್ಥಳದ ವಿವಿಧೆಡೆ ಅಗೆದಿರುವ ಮಣ್ಣು ಮತ್ತು ಸಿಕ್ಕಿರುವ ಅಸ್ಥಿಪಂಜರದ ಕುರುಹುಗಳನ್ನು ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಲಾಗಿದೆ. ವರದಿ ಬಂದ ಬಳಿಕ ತನಿಖೆ ಚುರುಕುಗೊಳ್ಳಳಲಿದ್ದು, ಮತ್ತೆ ಎರಡ್ಮೂರು ಕಡೆ ಮೂಳೆಗಾಗಿ ಶೋಧ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ವಾರಾಂತ್ಯದಲ್ಲೇ ಎಫ್ಎಸ್ಎಲ್ ವರದಿ ಎಸ್ಐಟಿ ಕೈಸೇರಲಿದೆ. ಇದರಲ್ಲಿ ಪ್ರಮುಖವಾಗಿ ಮೂರು ಅಂಶಗಳ ಬಗ್ಗೆ ಉಲ್ಲೇಖ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಎಫ್ಎಸ್ಎಲ್ ವರದಿಯಿಂದ ಎಸ್ಐಟಿ ನಿರೀಕ್ಷಿಸಿರುವುದೇನು?

ಪತ್ತೆಯಾಗಿರುವ ಅಸ್ಥಿಪಂಜರ ಮಹಿಳೆಯದ್ದೋ ಅಥವಾ ಪುರುಷನದ್ದಾ ಎಂಬುದು ಎಫ್ಎಸ್ಎಲ್ ವರದಿಯಿಂದ ತಿಳಿಯಲಿದೆ. ಪತ್ತೆಯಾಗಿರುವ ಅಸ್ಥಿಪಂಜರದ ವಯಸ್ಸು, ಮೃತಪಟ್ಟು ಎಷ್ಟು ವರ್ಷ ಆಗಿದೆ ಎಂಬ ಮಾಹಿತಿಯೂ ಎಸ್ಐಟಿ ಕೈ ಸೇರಲಿದೆ. ಹೀಗಾಗಿ ಎಫ್ಎಸ್ಎಲ್ ವರದಿಯತ್ತ ಎಸ್ಐಟಿ ಅಧಿಕಾರಿಗಳು ಚಿತ್ತ ನೆಟ್ಟಿದ್ದಾರೆ. ಸಂಗ್ರಹಿಸಿದ ಮಣ್ಣಿನಲ್ಲಿ ಮಾನವನ ಮೂಳೆಗಳು ಕರಗಿವೆಯೇ ಎಂಬ ಬಗ್ಗೆಯೂ ಅಧಿಕಾರಿಗಳು ಪರೀಕ್ಷೆ ನಡೆಸಲಿದ್ದಾರೆ. ಮೂಳೆಗಳು ಕರಗಿದ್ದ ಬಗ್ಗೆ ದೂರುದಾರ ಸಂಶಯ ವ್ಯಕ್ತಪಡಿಸಿದ್ದಾನೆ. ಹೀಗಾಗಿ ಎಲ್ಲಾ ಆಯಾಮಗಳಲ್ಲೂ ಎಸ್ಐಟಿ ತನಿಖೆ ನಡೆಸುತ್ತಿದೆ.

ಎಸ್ಐಟಿ ವರದಿ ಕೈಸೇರಿರುವ ಹೊತ್ತಿಗೆ ವಿಧಾನಸಭೆ ಕಲಾಪವೂ ಅಂತ್ಯವಾಗಲಿದೆ. ಬಳಿಕ ಮುಂದಿನ ವಾರದಿಂದ ಮತ್ತೆ ಶೋಧ ಕಾರ್ಯ ಆರಂಭವಾಗುವ ಸಾಧ್ಯತೆ ಇದೆ. ತನಿಖೆ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ‘ಧರ್ಮಸ್ಥಳ ಪ್ರಕರಣದ ಮಧ್ಯಂತರ ವರದಿ ಬೇಗ ಬರಲಿದೆ’ ಎಂದಿದ್ದಾರೆ.

ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ಅನಾಮಿಕನ ವಿಚಾರಣೆ

ಉತ್ಖನನ ಕಾರ್ಯ ಸದ್ಯಕ್ಕೆ ಸ್ಥಗಿತಗೊಂಡಿದೆ. ಶೋಧ ಕಾರ್ಯಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಆದರೆ, ಎಸ್ಐಟಿ ತನಿಖೆ ನಿಂತಿಲ್ಲ. ಅನಾಮಿಕ ದೂರುದಾರನನ್ನು ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಮತ್ತೊಬ್ಬ ದೂರುದಾರ ಜಯಂತ್ ಕೂಡಾ ಎಸ್ಐಟಿ ಕಚೇರಿಗೆ ಬಂದಿದ್ದಾರೆ.

ಏತನ್ಮಧ್ಯೆ, ಎಸ್ಐಟಿ ರಚನೆಗೆ ನಮ್ಮ ವಿರೋಧವಿಲ್ಲ. ಆದರೆ, ಎಸ್ಐಟಿ ರಚನೆಯಾಗಲು ಹಿಂದಿರುವ ಕೈ ಯಾವುದು? ರಚನೆಯಾಗಿದ್ದೇಕೆ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *