ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಎದುರು ಸಾಕ್ಷಿ ನುಡಿದಿದ್ದ ಸ್ಯಾಂಡಲ್ವುಡ್ನ ಹಾಸ್ಯನಟ ಚಿಕ್ಕಣ್ಣ ಅವರಿಂದು ತನಿಖಾಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದರು.
ಜೂನ್ 8ರಂದು ಆರೋಪಿ ವಿನಯ್ ಮಾಲೀಕತ್ವದ ಸ್ಟೋನಿ ಬ್ರೂಕ್ ಅಂಡ್ ಪಬ್ನಲ್ಲಿ ದರ್ಶನ್ ಹಾಗೂ ತಂಡದ ಸದಸ್ಯರ ಜೊತೆ ಚಿಕ್ಕಣ್ಣ ಪಾರ್ಟಿ ಮಾಡಿದ್ದರು. ಪಟ್ಟಣಗೆರೆ ಶೆಡ್ನಿಂದ ಆರೋಪಿಗಳ ಮತ್ತೊಂದು ತಂಡದಿಂದ ಕರೆ ಬರುತ್ತಿದ್ದಂತೆ ಅಲ್ಲಿಂದ ನಿರ್ಗಮಿಸಿದ್ದರು. ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಚಿಕಣ್ಣ ಅವರನ್ನು ಸಾಕ್ಷಿಯಾಗಿ ಪರಿಗಣಿಸಿ ಸಿಆರ್ಪಿಸಿ 164ರಡಿ ನ್ಯಾಯಾಲಯದೆದುರು ಹೇಳಿಕೆ ದಾಖಲಿಸಿಕೊಂಡಿದ್ದರು.
ಹೇಳಿಕೆ ನೀಡಿ ಕೆಲ ದಿನಗಳ ಬಳಿಕ ಜೈಲಿನಲ್ಲಿದ್ದ ಆರೋಪಿ ದರ್ಶನ್ನನ್ನು ಚಿಕ್ಕಣ್ಣ ಭೇಟಿ ಮಾಡಿದ್ದರು. ಇದು ಹಲವು ಅನುಮಾನ ಹಾಗೂ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ದಯಾನಂದ ಅವರು ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದಿದ್ದರು. ಈ ಭೇಟಿ ಸಂಬಂಧ ವಿಚಾರಣೆಗೆ ಬರುವಂತೆ ತನಿಖಾಧಿಕಾರಿಗಳು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾದರು.
ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚಿಕ್ಕಣ್ಣ, ದರ್ಶನ್ ಭೇಟಿ ಸಂಬಂಧ ಜೈಲಿಗೆ ಹೋದಾಗ ಏನು ಮಾತನಾಡಿದ್ರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇನೆ. ಸಾಕ್ಷಿದಾರನಾಗಿ ಆರೋಪಿತರನ್ನು ಭೇಟಿ ಮಾಡಬಾರದೆಂದು ಗೊತ್ತಿರಲಿಲ್ಲ. ಈ ಬಗ್ಗೆ ಮೊದಲೇ ತಿಳಿದಿದ್ದರೆ ಹೋಗುತ್ತಿರಲಿಲ್ಲ. ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ಹೆಚ್ಚು ಮಾತನಾಡಲು ಸಾಧ್ಯವಿಲ್ಲ. ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ. ಒಂದು ವೇಳೆ ಕರೆದರೆ ತನಿಖೆಗೆ ಸಹಕರಿಸುವೆ ಎಂದು ತಿಳಿಸಿದರು.
”ಇತ್ತೀಚೆಗೆ ದರ್ಶನ್ ಅವರನ್ನು ಭೇಟಿ ಮಾಡಲು ಹೋದ ಹಿನ್ನೆಲೆ ನನ್ನನ್ನು ಇಂದು ವಿಚಾರಣೆಗೆ ಕರೆಸಿದ್ರು. ಅವರೊಟ್ಟಿಗೆ ಏನು ಮಾನಾಡಿದ್ರಿ ಎಂಬ ಪ್ರಶ್ನೆಗಳು ತನಿಖಾಧಿಕಾರಿಗಳಿಂದ ಎದುರಾದವು. ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ನಾನೂ ಕೂಡಾ ಸಾಕ್ಷಿದಾರನಾಗಿದ್ದು, ಆರೋಪಿಗಳನ್ನು ಭೇಟಿ ಮಾಡಬಾರದೆಂಬ ವಿಚಾರ ನನಗೆ ಗೊತ್ತಿರಲಿಲ್ಲ. ಗೊತ್ತಿದ್ರೆ ಮೋಸ್ಟ್ಲಿ ಹೋಗುತ್ತಿರಲಿಲ್ಲ. ಹಾಗಾಗಿಯೇ ನನ್ನನ್ನು ಇಂದು ವಿಚಾರಣೆಗೆ ಕರೆದಿದ್ರು. ಅವರು ಏನೇನು ಕೇಳಿದ್ದಾರೋ ಅದಕ್ಕೆ ಉತ್ತರಿಸಿದ್ದೇನೆ” – ನಟ ಚಿಕ್ಕಣ್ಣ.