ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ಸಿಎಸ್ಆರ್ ಕಾರ್ಯಕ್ರಮ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ನಡುವೆ ಪತ್ರಕರ್ತರ ತರಬೇತಿಗಾಗಿ ಮಹತ್ವದ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಇದು ಮಾಧ್ಯಮ ಅಕಾಡೆಮಿಯ ಮೊದಲ ಸಿಎಸ್ಆರ್ ಯೋಜನೆಆಗಿದ್ದು, ಪತ್ರಕರ್ತರ ಸಾಫ್ಟ್‌ಸ್ಕಿಲ್ ತರಬೇತಿ, ಡಿಜಿಟಲ್ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಸಾಮರ್ಥ್ಯ ನಿರ್ಮಾಣ ಮುಖ್ಯ ಉದ್ದೇಶವಾಗಿದೆ.
“ಹೊಸ ಮಾಧ್ಯಮದ ಸವಾಲುಗಳಿಗೆ ಹೊಂದಿಕೊಳ್ಳಲು ಈ ಸಹಭಾಗಿತ್ವ ದೊಡ್ಡ ಹೆಜ್ಜೆ. ಸ್ಪ್ರಿಂಗ್ಬೋರ್ಡ್ ಪ್ಲಾಟ್ಫಾರ್ಮ್ ಪತ್ರಕರ್ತರ ತಾಂತ್ರಿಕ ಪರಿಣತಿ ಹಾಗೂ ಸುದ್ದಿಯನ್ನು ಪ್ರಸ್ತುತಪಡಿಸುವ ಕೌಶಲ್ಯ ವೃದ್ಧಿಸಲು ಸಹಕಾರಿ” ಎಂದು ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಹೇಳಿದ್ದಾರೆ.
ಇನ್ಫೋಸಿಸ್ ಹಿರಿಯ ಉಪಾಧ್ಯಕ್ಷ ಸತೀಶ ಬಿ. ನಂಜಪ್ಪ ಅವರು, “ಸ್ಪ್ರಿಂಗ್ಬೋರ್ಡ್‌ನ ಡಿಜಿಟಲ್ ವಿಷಯಗಳು ಪತ್ರಕರ್ತರಿಗೆ ಲಭ್ಯವಾಗುತ್ತವೆ. ಇದರಿಂದ ಸಾಫ್ಟ್ ಸ್ಕಿಲ್ಸ್, ವ್ಯಕ್ತಿತ್ವ ವಿಕಾಸ, ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಇತ್ತೀಚಿನ ತಂತ್ರಜ್ಞಾನಗಳ ಅರಿವು ಹೆಚ್ಚುತ್ತದೆ. ವಿಶೇಷವಾಗಿ 2ನೇ ಮತ್ತು 3ನೇ ಹಂತದ ನಗರಗಳ ಪತ್ರಕರ್ತರಿಗೆ ಇದು ಬಹಳ ಉಪಯುಕ್ತ” ಎಂದಿದ್ದಾರೆ.
ಈ ಯೋಜನೆಯಡಿ ಮೂರು ದಿನಗಳ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಡಿಜಿಟಲ್ ಮಾಧ್ಯಮ, AI ಬಳಕೆ, ಹಾಗೂ ವ್ಯಕ್ತಿತ್ವ ವಿಕಸನದ ವಿಷಯಗಳನ್ನು ಒಳಗೊಂಡಿರುತ್ತದೆ. ಈ ವರ್ಷ ಮೂರು ಬ್ಯಾಚ್‌ಗಳಲ್ಲಿ 150 ಪತ್ರಕರ್ತರಿಗೆ ತರಬೇತಿ ನೀಡುವ ಯೋಜನೆಯಿದೆ. ಅದರಲ್ಲಿ ಒಂದು ಬ್ಯಾಚ್ ಸಂಪೂರ್ಣವಾಗಿ ಮಹಿಳಾ ಪತ್ರಕರ್ತೆಯರಿಗೆ ಮೀಸಲು. ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಆದ್ಯತೆ ನೀಡಲಾಗಿದೆ.
ಇನ್ಫೋಸಿಸ್ ಪ್ಲಾಟ್ಫಾರ್ಮ್ ಮತ್ತು ಪರಿಣತಿ ಒದಗಿಸಲಿದ್ದು, ಮಾಧ್ಯಮ ಅಕಾಡೆಮಿ ಪತ್ರಕರ್ತರ ಭಾಗವಹಿಸುವಿಕೆಯನ್ನು ಸಮನ್ವಯಗೊಳಿಸಲಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗುಣಮಟ್ಟ ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ, ಸದಸ್ಯ ಹೆಚ್.ವಿ. ಕಿರಣ್, ಇನ್ಫೋಸಿಸ್ ಹಿರಿಯ ಉಪಾಧ್ಯಕ್ಷ ಸತೀಶ ಬಿ. ನಂಜಪ್ಪ, ಹಾಗೂ ಅಧಿಕಾರಿಗಳಾದ ಸಂತೋಷ್ ಅನಂತಪುರ, ಬಿಳಿಗಿರಿ ರಂಗ ಉಪಸ್ಥಿತರಿದ್ದರು.
For More Updates Join our WhatsApp Group :