ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈ ಬಾರಿ ದೀಪಾವಳಿ ಉಡುಗೊರೆಯಾಗಿ, ದೇಶದ ಸಾಮಾನ್ಯ ಜನರಿಗೆ ಸರಕು ಮತ್ತು ಸೇವಾ ತೆರಿಗೆ (GST)ಯಲ್ಲಿ ಹೊಸ ಪೀಳಿಗೆಯ ಸುಧಾರಣೆಗಳನ್ನು ಮಾಡುವುದಾಗಿ ಘೋಷಿಸಿದರು.
79ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಲ್ಲಿ ಭಾಷಣದ ವೇಳೆ ಮೋದಿ, ಬೆಳಕಿನ ಹಬ್ಬ ಬರುವ ಹೊತ್ತಿಗೆ, ರಾಜ್ಯಗಳೊಂದಿಗೆ ಸಮಾಲೋಚಿಸಿ ಜಿಎಸ್‌ಟಿಯಲ್ಲಿ ಪ್ರಮುಖ ಬದಲಾವಣೆಗಳು ಮತ್ತು ಸೇರ್ಪಡೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಪರೋಕ್ಷ ತೆರಿಗೆ ವ್ಯವಸ್ಥೆಯು 8 ವರ್ಷಗಳನ್ನು ಪೂರ್ಣಗೊಳಿಸಿರುವುದರಿಂದ ಜಿಎಸ್‌ಟಿಯಲ್ಲಿ ಸುಧಾರಣೆಗಳನ್ನು ಕೈಗೊಳ್ಳುವ ಸಮಯ ಬಂದಿದೆ. ಈ ಸುಧಾರಣೆಗಳು ಸಾಮಾನ್ಯ ಜನರ ಮೇಲಿನ ತೆರಿಗೆ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಿವೆ ಹಾಗೂ ಭಾರಿ ಪರಿಹಾರ ನೀಡಲಿವೆ.
ಇದಿರಂದ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಎಂಎಸ್‌ಎಂಇಗಳಿಗೆ ದೊಡ್ಡ ಪ್ರಮಾಣದಲ್ಲಿ ಪ್ರಯೋಜನವಾಗಲಿದೆ. ಜಿಎಸ್‌ಟಿ ಸುಧಾರಣೆಗಳ ನಂತರ, ಅನೇಕ ಅಗತ್ಯ ವಸ್ತುಗಳು ಅಗ್ಗದ ಬೆಲೆಯಲ್ಲಿ ಸಿಗಲಿವೆ, ಇದು ದೇಶದ ಆರ್ಥಿಕತೆಯನ್ನು ಬಲಪಡಿಸಲಿದೆ ಎಂದು ಮೋದಿ ಹೇಳಿದರು.
ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದಿಂದಲೇ ಇಂದು ಭಾರತ ಬಲಿಷ್ಠಗೊಂಡಿದೆ. ಎಲ್ಲಾ ವಲಯಗಳಲ್ಲಿಯೂ ಸುಧಾರಣೆಗಳನ್ನು ತರಲಾಗುತ್ತಿದೆ. ಇದರಲ್ಲಿ ಯಾವುದೇ ಹಿನ್ನಡೆ ಇಲ್ಲ ಎಂದ ಪ್ರಧಾನಿ ಮೋದಿ, ನಾವು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ದೇಶದ ಹಿತಾಸಕ್ತಿಗಾಗಿಯೇ ಆಗಿರುತ್ತದೆ.
ನೀತಿ, ರಚನಾತ್ಮಕ ಮತ್ತು ಆರ್ಥಿಕ ಸುಧಾರಣೆಗಳ ವಿಷಯದಲ್ಲಿ ಹಿಮ್ಮೆಟ್ಟುವ ಪ್ರಶ್ನೆಯೇ ಇಲ್ಲ. ಬದಲಾವಣೆ ಅಗತ್ಯವಿರುವಲ್ಲೆಲ್ಲಾ ಸುಧಾರಣೆಗಳಿಗೆ ಭಾರತ ಸಿದ್ಧವಾಗಿದೆ. ಬೆಳೆಯುತ್ತಿರುವ ಭಾರತೀಯ ಆರ್ಥಿಕತೆಯು ತಳಮಟ್ಟದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ನೆರವಾಗಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.
ನಗದು ವರ್ಗಾವಣೆ ಯೋಜನೆ ಸಾಮಾನ್ಯ ಬಡವರಿಗೆ ವರದಾನವಾಗಿದೆ. 25 ಕೋಟಿ ಬಡ ಜನರನ್ನು ಈಗ ಕೆಳ ಮಧ್ಯಮ ವರ್ಗಕ್ಕೆ ತರಲಾಗಿದೆ. ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದ ಸಂಯೋಜಿತ ಶಕ್ತಿಯು ಭಾರತೀಯ ಆರ್ಥಿಕತೆಯನ್ನು ಬಲಪಡಿಸುತ್ತಿದೆ. ಕೌಶಲ್ಯ ಅಭಿವೃದ್ಧಿಯೊಂದಿಗೆ ಸ್ವ-ಉದ್ಯೋಗ ಕ್ಷೇತ್ರಗಳಲ್ಲಿ ಭಾರತೀಯ ಯುವಕರು ಮುಂದಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಭಾರತದ ಆರ್ಥಿಕ ಶಿಸ್ತು ವಿಶ್ವದ ಆರ್ಥಿಕತೆಗಳಿಗೆ ಒಂದು ಪಾಠವಾಗಿದೆ. ಭಾರತದಲ್ಲಿ ಹಣದುಬ್ಬರ ನಿಯಂತ್ರಣ ಮತ್ತು ವಿದೇಶಿ ವಿನಿಮಯ ನಿರ್ವಹಣೆ ತುಂಬಾ ಪ್ರಬಲವಾಗಿದೆ ಎಂದು ಮೋದಿ ಹೊಗಳಿದರು.
ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ವ್ಯಾಪಾರಿಗಳಿಗೆ ಮನವಿ ಮಾಡಿದ ಪ್ರಧಾನಿ, ಹಲವರ ತ್ಯಾಗದಿಂದಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಈಗ ನಾವು ಸ್ವಾವಲಂಬನೆ ಸಾಧಿಸಬೇಕು. ಆ ದಿಕ್ಕಿನತ್ತ ನಾವು ದೃಢನಿಶ್ಚಯದಿಂದ ನಡೆಯಬೇಕು. ಭಾರತದಲ್ಲಿ ಉತ್ಪಾದನೆಯಾಗುವ ವಸ್ತುಗಳ ಬಳಕೆಯು ಹೆಚ್ಚಾಗುತ್ತಲೇ ಇರಬೇಕು. ಸ್ವದೇಶಿ ಎಂಬ ಪದವು ದೌರ್ಬಲ್ಯವಲ್ಲ. ಅದು ನಮ್ಮ ಶಕ್ತಿಯನ್ನು ತೋರಿಸಬೇಕು. ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ನಾನು ವ್ಯಾಪಾರಿಗಳಿಗೆ ಕೇಳುತ್ತಿದ್ದೇನೆ. ಗುಣಮಟ್ಟವು ನಮ್ಮ ದೇಶದ ಬ್ರಾಂಡ್ ಆಗಿರಬೇಕು ಎಂದು ಕರೆ ನೀಡಿದರು.
For More Updates Join our WhatsApp Group :