BJP – JDSಗೆ ನೈತಿಕತೆ ಇದೆಯೇ? : ಪುಷ್ಪಾ ಅಮರನಾಥ್

ಮೈಸೂರು: ‘ಹಲವು ಹಗರಣಗಳ ರೂವಾರಿಗಳಾದ ಬಿಜೆಪಿ-ಜೆಡಿಎಸ್ನವರು ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ನಡೆಸಲು ಯಾವ ನೈತಿಕತೆ ಇದೆ’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಕೇಳಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಆ ಪಕ್ಷಗಳ ನಾಯಕರಿಗೆ ರಾಜ್ಯದ ಪರವಾಗಿ ನಿಜವಾಗಿಯೂ ಕಾಳಜಿ ಇದ್ದಿದ್ದರೆ ಅವರು ಮೈಸೂರಿನ ಬದಲಿಗೆ ನವದೆಹಲಿಗೆ ಪಾದಯಾತ್ರೆ ನಡೆಸಬೇಕಿತ್ತು.

ಅಲ್ಲಿಗೆ ಹೋಗಿ, ರಾಜ್ಯಕ್ಕೆ ತೆರಿಗೆ ಸೇರಿದಂತೆ ಹಲವು ವಿಚಾರಗಳಲ್ಲಿ ಆಗಿರುವ ಅನ್ಯಾಯವನ್ನು ಪ್ರಶ್ನಿಸಬೇಕಿತ್ತು’ ಎಂದರು.

‘ನಮ್ಮ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಕೇಂದ್ರದ ಬಿಜೆಪಿ ನಾಯಕರು ದೊಡ್ಡ ಷಡ್ಯಂತ್ರ ನಡೆಸುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ’ ಎಂದು ಹೇಳಿದರು.

‘ಯಾವ ಕಾರಣಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ ಎನ್ನುವುದು ಮೈಸೂರು ಚಲೋ ಪಾದಯಾತ್ರೆ ಕೈಗೊಂಡಿರುವ ವಿರೋಧ ಪಕ್ಷದವರಿಗೆ ಗೊತ್ತೇ ಇಲ್ಲ. ದ್ವೇಷ ರಾಜಕಾರಣವನ್ನು ಅವರು ಮಾಡುತ್ತಿದ್ದಾರೆ. ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವುದನ್ನು ನೋಡಿಕೊಳ್ಳದೇ, ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿ ಸರ್ಕಾರವಿದ್ದಾಗ ಬಹಳಷ್ಟು ಹಗರಣಗಳು ನಡೆದಿವೆ. ಆದರೆ, ಈಗ ಸತ್ಯಹರಿಶ್ಚಂದ್ರರ ರೀತಿ ಅವರು ಮಾತನಾಡುತ್ತಿದ್ದಾರೆ. ಕೋವಿಡ್ ಸಂಕಷ್ಟದ ಅವಧಿಯಲ್ಲಿ ಹೆಣದ ಮೇಲೆ ರಾಜಕಾರಣ ಮಾಡಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಶೇ 40ರಷ್ಟು ಕಮಿಷನ್ ಸರ್ಕಾರ ಅವರದಾಗಿತ್ತು. ಆ ಕಾರಣಕ್ಕಾಗಿಯೇ ಜನರು ಬಿಜೆಪಿಯವರನ್ನು ಸೋಲಿಸಿ ನಮಗೆ ಅಧಿಕಾರ ನೀಡಿದ್ದಾರೆ. ಅವರ ಅಕ್ರಮಗಳ ಕುರಿತು ನಾವು ತನಿಖೆಯನ್ನೂ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.

‘ಕಾವೇರಿ ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಎಚ್.ಡಿ. ಕುಮಾರಸ್ವಾಮಿ ಮಾತು ತಪ್ಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಿಂತು ಕರ್ನಾಟಕದ ಪರವಾಗಿ ದನಿ ಎತ್ತುವ ತಾಕತ್ತು ಅವರಿಗಿಲ್ಲವೇ’ ಎಂದು ಪ್ರಶ್ನಿಸಿದರು.

‘ಬಿಜೆಪಿ-ಜೆಡಿಎಸ್ನಲ್ಲಿರುವ ನಾಯಕಿಯರು, ಮಹಿಳೆಯರಿಗೆ ಅನ್ಯಾಯವಾದಾಗ ದನಿ ಎತ್ತುವುದಿಲ್ಲವೇಕೆ. ಹಾಸನದ ಪೆನ್ಡ್ರೈವ್ ಪ್ರಕರಣದಲ್ಲಿ ಮಹಿಳೆಯರ ಪರವಾಗಿ ಮಾತನಾಡಲಿಲ್ಲವೇಕೆ?’ ಎಂದು ಕೇಳಿದರು.

ಪಕ್ಷದ ನಾಯಕಿರಾದ ಲತಾ ಸಿದ್ದಶೆಟ್ಟಿ, ಪುಷ್ಪವಲ್ಲಿ, ಸುಶೀಲಾ ನಂಜಪ್ಪ, ಪುಷ್ಪಲತಾ ಚಿಕ್ಕಣ್ಣ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *