ಖ್ಯಾತ ಕನ್ನಡ ನಟ ಡಾಲಿ ಧನಂಜಯ್ ಅವರು ತಮ್ಮ 39ನೇ ಹುಟ್ಟುಹಬ್ಬವನ್ನು ಈ ಬಾರಿ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಅವರು ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳ ನಿರಾಶೆಗೆ ಕಾರಣವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ
ಸೆಲೆಬ್ರಿಟಿಗಳ ಬರ್ತ್ಡೇ ಎಂದರೆ ಫ್ಯಾನ್ಸ್ ಹಬ್ಬದ ರೀತಿ ಸಂಭ್ರಮಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ಹಾಕುತ್ತಾರೆ. ನೆಚ್ಚಿನ ನಟನ ಮನೆ ಮುಂದೆ ರಾತ್ರಿಯೇ ಹಾಜರಿ ಹಾಕಿ, ಕೇಕ್ ಕತ್ತರಿಸಿ, ನಟನಿಗೆ ಹೂವಿನ ಹಾರ ಹಾಕಿ ಸಂಭ್ರಮಿಸುತ್ತಾರೆ. ಆದರೆ, ಕೆಲವೊಮ್ಮೆ ವೈಯಕ್ತಿಕ ಕಾರಣಗಳಿಗೆ ಸೆಲೆಬ್ರಿಟಿಗಳು ಬರ್ತ್ಡೇ ಆಚರಿಸಿಕೊಳ್ಳೋದಿಲ್ಲ. ನಟ ಡಾಲಿ ಧನಂಜಯ್ ಕೂಡ ಈಗ ಇದೇ ರೀತಿಯ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.
ಕನ್ನಡದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಧನಂಜಯ್ಗೆ ಇದೆ. ಅವರು ‘ಟಗರು’ ಸಿನಿಮಾದಲ್ಲಿ ‘ಡಾಲಿ’ ಪಾತ್ರ ಮಾಡಿ ಅದೇ ಹೆಸರಲ್ಲಿ ಫೇಮಸ್ ಆದರು. ಆಗಸ್ಟ್ 23ರಂದು ಅವರು 39ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಆದರೆ, ಈ ಬಾರಿ ಅವರು ಅಭಿಮಾನಿಗಳಿಗೆ ಸಿಗುತ್ತಿಲ್ಲ. ಈ ವಿಚಾರದ ಬಗ್ಗೆ ಅವರು ಕೆಲವೇ ದಿನ ಮೊದಲ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ.
‘ನನ್ನ ಪ್ರೀತಿಯ ಅಭಿಮಾನಿಗಳೇ, ಆಗಸ್ಟ್ 23ರಂದು ನನ್ನ ಬರ್ತ್ಡೇ. ಪ್ರತಿ ವರ್ಷ ನನ್ನ ಜನ್ಮದಿನ ಅಂದರೆ ಅದು ನನ್ನ ಹಬ್ಬಕ್ಕಿಂತ ಹೆಚ್ಚು ನಿಮ್ಮ ಹಬ್ಬ. ನಿಮ್ಮ ಪ್ರೀತಿ, ನಿಮ್ಮ ಎನರ್ಜಿ, ನಿಮ್ಮ ಸಂಭ್ರಮ ಅದೇ ನನ್ನ ಶಕ್ತಿ. ಆದರೆ ಈ ಬಾರಿ ನಾನು ಕೆಲಸದ ನಿಮಿತ್ತ ಹೊರಗಡೆ ಹೋಗುತ್ತಿದ್ದೇನೆ. ಈ ಸಂಭ್ರಮಾಚರಣೆಗೆ ನಿಮ್ಮ ಜೊತೆ ಇರಲಾಗದಿದ್ದರೂ, ನಿಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನೊಡನೆ ಇರುತ್ತದೆ ಎನ್ನುವ ದೃಢ ನಂಬಿಕೆಯಿದೆ. ಮುಂದಿನ ಸಲ ಇನ್ನೂ ಡಬ್ಬಲ್ ಎನರ್ಜಿ, ಡಬ್ಬಲ್ ಸಂಭ್ರಮ, ಜೊತೆಗೆ ಆಚರಿಸೋಣ. ಲವ್ ಯೂ ಆಲ್, ಡಾಲಿ’ ಎಂದು ಬರೆದುಕೊಂಡಿದ್ದಾರೆ.
ಡಾಲಿ ಧನಂಜಯ್ಗೆ ವಿವಾಹ ಆದ ಬಳಿಕ ಇದು ಮೊದಲ ಜನ್ಮದಿನ. ಹೀಗಾಗಿ, ಪತ್ನಿ ಧನ್ಯಾತ ಜೊತೆ ಅವರು ಎಲ್ಲಾದರೂ ಸುತ್ತಾಡಲು ಹೋಗಲು ಪ್ಲ್ಯಾನ್ ಮಾಡಿರಬಹುದು ಎನ್ನಲಾಗುತ್ತಿದೆ. ಅಲ್ಲದೆ, ಈ ಬಾರಿ ಆರ್ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣ ಎಲ್ಲರಿಗೂ ಭಯ ತರಿಸಿದೆ. ಈ ಕಾರಣದಿಂದಲೇ ಅನೇಕರು ಅಭಿಮಾನಿಗಳನ್ನು ಸೇರಿಸಲು ಹೆದರುತ್ತಿದ್ದಾರೆ.
For More Updates Join our WhatsApp Group :