ಎಲೋನ್ ಮಸ್ಕ್, ವಿವೇಕ್ ರಾಮಸ್ವಾಮಿಗೆ ಮಹತ್ವದ ಹುದ್ದೆ ನೀಡಿದ ಡೊನಾಲ್ಡ್ ಟ್ರಂಪ್

ಎಲೋನ್ ಮಸ್ಕ್, ವಿವೇಕ್ ರಾಮಸ್ವಾಮಿಗೆ ಮಹತ್ವದ ಹುದ್ದೆ ನೀಡಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ಮತ್ತು ಭಾರತೀಯ ಮೂಲದ ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕದ ಹೊಸ ಸರ್ಕಾರದ ಭಾಗವಾಗಲಿದ್ದಾರೆ. ಈ ಇಬ್ಬರು ಸರ್ಕಾರಿ ದಕ್ಷತೆ (DOGE) ಇಲಾಖೆಯನ್ನು ಮುನ್ನಡೆಸುವರು. ನಿಯೋಜಿತ ಅಧ್ಯಕ್ಷ ಟ್ರಂಪ್ ಮಂಗಳವಾರ ಈ ಕುರಿತು ಘೋಷಣೆ ಮಾಡಿದ್ದಾರೆ.

ಶ್ರೇಷ್ಟ ವ್ಯಕ್ತಿ ಎಲೋನ್ ಮಸ್ಕ್ ಅವರು ಅಮೆರಿಕದ ದೇಶಪ್ರೇಮಿ ವಿವೇಕ್ ರಾಮಸ್ವಾಮಿ ಅವರೊಂದಿಗೆ ಸರ್ಕಾರಿ ದಕ್ಷತೆಯ ಇಲಾಖೆಯನ್ನು ಮುನ್ನಡೆಸಲಿದ್ದಾರೆ ಎಂದು ಘೋಷಿಸಲು ನಾನು ಸಂತಸಪಡುತ್ತಿದ್ದೇನೆ” ಎಂದು ಟ್ರಂಪ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಇಬ್ಬರು ಸರ್ಕಾರಿ ಅಧಿಕಾರಶಾಹಿ, ಹೆಚ್ಚುವರಿ ನಿರ್ಬಂಧಗಳು, ಅನವಶ್ಯಕ ವೆಚ್ಚಗಳನ್ನು ಕಡಿತಗೊಳಿಸುವುದು ಮತ್ತು ಫೆಡರಲ್ ಏಜೆನ್ಸಿಗಳನ್ನು ಪುನರ್ರಚಿಸಲಿದ್ದಾರೆ. ‘ಅಮೆರಿಕದ ರಕ್ಷಣೆಯ ಚಳವಳಿ’ಗೆ ಇಂಥ ಕ್ರಮಗಳು ಅವಶ್ಯಕ. ಅಷ್ಟೇ ಅಲ್ಲದೇ, ಸರ್ಕಾರಿ ದುಂದುವೆಚ್ಚದಲ್ಲಿ ಭಾಗಿಯಾಗುವ ಸಾಕಷ್ಟು ಜನರಿಗೂ ನಮ್ಮ ಕ್ರಮಗಳು ಆಘಾತ ನೀಡಲಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

DOGE ಉದ್ದೇಶಗಳ ಕುರಿತಾಗಿ ರಿಪಬ್ಲಿಕನ್ ರಾಜಕಾರಣಿಗಳು ಬಹಳ ಕಾಲದಿಂದಲೂ ಕನಸು ಕಾಣುತ್ತಿದ್ದರು. ಅಮೆರಿಕದ ಆಡಳಿತಶಾಹಿಯಲ್ಲಿ ಮಹತ್ವರ ಬದಲಾವಣೆ ತರಲಿರುವ ಈ ಇಲಾಖೆ, ಸರ್ಕಾರಕ್ಕೆ ಸೂಕ್ತ ಸಲಹೆ, ಮಾರ್ಗದರ್ಶನಗಳನ್ನು ಸರ್ಕಾರದ ಹೊರಗಿನಿಂದ ನೀಡಲಿದೆ. ಈ ಮೂಲಕ ವೈಟ್ಹೌಸ್ನ ಆಡಳಿತ ಸುಧಾರಣಾ ಕ್ರಮಗಳಿಗೆ ಜೊತೆಯಾಗಲಿದೆ.

ಎಲೋನ್ ಮಸ್ಕ್ ಮತ್ತು ವಿವೇಕ್ ರಾಮಸ್ವಾಮಿ ಅವರು ದಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಫೆಡರಲ್ ಸರ್ಕಾರದಲ್ಲಿ ಸೂಕ್ತ ಬದಲಾವಣೆ ಮಾಡುವುದು ಮತ್ತು ಇದರೊಂದಿಗೆ ಅಮೆರಿಕನ್ನರ ಬದುಕನ್ನು ಉತ್ತಮಗೊಳಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. ಇದೇ ವೇಳೆ, ಅಮೆರಿಕ ಸರ್ಕಾರದ ವಾರ್ಷಿಕ ಖರ್ಚುವೆಚ್ಚ 6.5 ಟ್ರಿಲಿಯನ್ ಡಾಲರ್ನಲ್ಲಿ ನಡೆಯುತ್ತಿರುವ ಅಪಾರ ದುಂದುವೆಚ್ಚಗಳು ಮತ್ತು ವಂಚನೆಗೆ ನಾವು ಕಡಿವಾಣ ಹಾಕುತ್ತೇವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *