ಪ್ರವೇಶ ಪತ್ರಗಳ ಡೌನ್ಲೋಡ್ ಸ್ಥಗಿತ: ಸರ್ಕಾರದ ಹುಳುಕು ಬಯಲಾಗಿದೆ ಎಂದ ವಿಜಯೇಂದ್ರ

ಬೆಂಗಳೂರು: ವಿವಿಧ ಗ್ರೂಪ್ ‘ಬಿ’ ಹುದ್ದೆಗಳಿಗೆ ಇದೇ 14 ಮತ್ತು 15 ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರವೇಶ ಪತ್ರಗಳ ಡೌನ್ಲೋಡ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಮೂಲಕ ಕೆಪಿಎಸ್ಸಿ ಮತ್ತು ಸರ್ಕಾರದ ಹುಳುಕು ಬಯಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

‘ಎಕ್ಸ್’ ಮೂಲಕ ಈ ವಿಷಯ ಪ್ರಸ್ತಾಪಿಸಿರುವ ಅವರು ಇದೇ 5 ರಂದು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಕೆಲವು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳ ಹಂಚಿಕೆಯಲ್ಲಿ ವ್ಯತ್ಯಾಸಗಳಾಗಿತ್ತು. ಇದೇ ಕಾರಣಕ್ಕೆ ಡೌನ್ಲೋಡ್ ಪ್ರಕ್ರಿಯೆ ತಡೆಹಿಡಿರುವುದು ಸರ್ಕಾರದ ಕಾರ್ಯವೈಖರಿಗೆ ಕೈಗನ್ನಡಿ ಎಂದು ಅವರು ಹರಿಹಾಯ್ದಿದ್ದಾರೆ.

ಕೆಪಿಎಸ್ಸಿ ಪರೀಕ್ಷೆಯ ಗೊಂದಲಗಳ ನಡುವೆ ಹಠಕ್ಕೆ ಬಿದ್ದಂತೆ ಪರೀಕ್ಷೆ ನಡೆಸಿದ್ದ ರಾಜ್ಯ ಸರ್ಕಾರ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಲೋಪ ಬಯಲಾದ ಬೆನ್ನಲ್ಲೇ ಮತ್ತೆ ಮರುಪರೀಕ್ಷೆಗೆ ಆದೇಶ ಹೊರಡಿಸಿ ಸಾವಿರಾರು ಪರೀಕ್ಷಾರ್ಥಿಗಳ ಶಾಪಕ್ಕೆ ಗುರಿಯಾಗಿತ್ತು. ಈಗ ಅಂತಹದ್ದೇ ಮತ್ತೊಂದು ಎಡವಟ್ಟು ಮಾಡಲು ಸರ್ಕಾರ ಮುಂದಾಗಿದೆ. ಇದೇ 22 ರಂದು ಯುಪಿಎಸ್ಸಿ ಮತ್ತು ಎಸ್.ಎಸ್.ಸಿ ಪರೀಕ್ಷೆಗಳ ದಿನಾಂಕ ನಿಗದಿಯಾಗಿದ್ದು, ಅದೇ ದಿನ ಪಿಎಸ್ಐ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಉದ್ಯೋಗಾಕಾಂಕ್ಷಿಗಳ ವಿರೋಧಿ ಅಲ್ಲದೆ ಬೇರೇನೂ ಅಲ್ಲ ಎಂದು ಹೇಳಿದ್ದಾರೆ. ಆದ್ದರಿಂದ, ಇದೇ 22 ರಂದು ನಡೆಸಲು ನಿರ್ಧರಿಸಿರುವ ಪಿಎಸ್ಐ ಪರೀಕ್ಷೆ ಮುಂದೂಡಿಕೆ ಮಾಡಬೇಕು. ಗ್ರೂಪ್ ಬಿ ಹುದ್ದೆಗಳ ಪ್ರವೇಶ ಪತ್ರ ಹಾಗೂ ಪರೀಕ್ಷಾ ಕೇಂದ್ರಗಳ ಗೊಂದಲ ನಿವಾರಿಸಿ ಪರೀಕ್ಷಾರ್ಥಿಗಳಿಗೆ ತೊಂದರೆ ಆಗದಂತೆ ಎಚ್ಚರವಹಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *