ಬೆಂಗಳೂರು: ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿಗೆ ಇಡಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಅಕ್ರಮ ಆನ್ಲೈನ್ ಮತ್ತು ಆಫ್ಲೈನ್ ಬೆಟ್ಟಿಂಗ್ ಪ್ರಕರಣ ವಿಚಾರವಾಗಿ ದಾಳಿ ಮಾಡಿ ಇದೀಗ ಅವರನ್ನು ಬಂಧಿಸಲಾಗಿದೆ , ಸತತ 18 ಗಂಟೆಗೂ ಹೆಚ್ಚು ಕಾಲ ಪರಿಶೀಲಿಸಿದ ಇಡಿ ಅಧಿಕಾರಿಗಳು, ಕೆ.ಸಿ.ವೀರೇಂದ್ರ ಪಪ್ಪಿ ಮನೆಯಲ್ಲಿ ಕೋಟ್ಯಂತರ ರೂ ನಗದು, ವಿದೇಶಿ ಕರೆನ್ಸಿ ಸೇರಿದಂತೆ ಚಿನ್ನಾಭರಣ ಮತ್ತು ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಕೆ.ಸಿ.ವೀರೇಂದ್ರ ಪಪ್ಪಿ ಮನೆಯಲ್ಲಿ ಸಿಕ್ಕಿದ್ದೇನು?
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ವೀರೇಂದ್ರ ಪಪ್ಪಿ ನಿವಾಸ ನಿನ್ನೆ ಮುಂಜಾನೆ 5 ಗಂಟೆಗೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ಮಧ್ಯರಾತ್ರಿ 12.45ಕ್ಕೆ ದಾಳಿ ಅಂತ್ಯಗೊಳಿಸಿದ್ದಾರೆ. ಸತತ 18 ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ವೇಳೆ 1 ಕೋಟಿ ರೂ ವಿದೇಶಿ ಕರೆನ್ಸಿ ಸೇರಿದಂತೆ ಸುಮಾರು 12 ಕೋಟಿ ರೂ ನಗದು ಪತ್ತೆ ಆಗಿದೆ. 6 ಕೋಟಿ ರೂ. ಮೌಲ್ಯದ ಚಿನ್ನ, ಸುಮಾರು 10 ಕೆಜಿ ಬೆಳ್ಳಿ, 4 ವಾಹನಗಳು, 17 ಬ್ಯಾಂಕ್ ಅಕೌಂಟ್ಸ್ ಮತ್ತು 2 ಲಾಕರ್ ಜಪ್ತಿ ಮಾಡಲಾಗಿದೆ.
ಇನ್ನು ಎಂಜಿಎಂ ಕ್ಯಾಸಿನೊ, ಮೆಟ್ರೋಪಾಲಿಟನ್ ಕ್ಯಾಸಿನೊ, ಬೆಲ್ಲಾಜಿಯೊ ಕ್ಯಾಸಿನೊ, ಮರೀನಾ ಕ್ಯಾಸಿನೊ, ಕ್ಯಾಸಿನೊ ಜ್ಯುವೆಲ್ ಹೀಗೆ ಅಂತಾರಾಷ್ಟ್ರೀಯ ಕ್ಯಾಸಿನೊ ಸದಸ್ಯತ್ವ, ವಿವಿಧ ಬ್ಯಾಂಕ್ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳು ಮತ್ತು ತಾಜ್, ಹಯಾತ್, ಲೀಲಾ ಐಷಾರಾಮಿ ಆತಿಥ್ಯ ಸದಸ್ಯತ್ವ ಕಾರ್ಡ್ಗಳನ್ನು ಕೆ.ಸಿ.ವೀರೇಂದ್ರ ಪಪ್ಪಿ ಹೊಂದಿದ್ದರು.
ಶಾಸಕ ಇಂದು ರಾತ್ರಿ ಬೆಂಗಳೂರಿಗೆ
ವ್ಯವಹಾರ ಸಂಬಂಧ ಜಾಗ ಭೋಗ್ಯ ಪಡೆಯಲು ಸಿಕ್ಕಿಂನಾ ಗ್ಯಾಂಗ್ಟಕ್ಗೆ ಹೋಗುವಾಗ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಬಂಧನವಾಗಿದ್ದು, ಸಿಕ್ಕಿಂ ನ್ಯಾಯಾಲಯಕ್ಕೆ ಹಾಜರು ಪಡಿಸಿ ಟ್ರಾನ್ಸಿಟ್ ವಾರೆಂಟ್ ಮೇಲೆ ಇಂದು ರಾತ್ರಿ ಬೆಂಗಳೂರಿಗೆ ಇಡಿ ಅಧಿಕಾರಿಗಳು ಕರೆತರಲಿದ್ದಾರೆ
ಸಿಕ್ಕಿಂನಿಂದ 11 ಗಂಟೆಯ ಅಕಾಸಾ ಏರ್ ವಿಮಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದ್ದು, ಅಲ್ಲಿಂದ ನೇರವಾಗಿ ಇಡಿ ಕಛೇರಿಗೆ ಕರೆದುಕೊಂಡು ಹೋಗಲಿದ್ದಾರೆ
For More Updates Join our WhatsApp Group :