ಉದಾರೀಕರಣ, ಖಾಸಗೀಕರಣ, ಜಾಗತೀಕರಣಗಳ ಕಾಲದಲ್ಲಿ ಕೃಷಿಯನ್ನು ಲಾಭದಾಯಕಗೊಳಿಸುವ ದೃಷ್ಟಿಯಿಂದ ಬೃಹತ್ ಬಂಡವಾಳ ಹೂಡಿಕೆಯ ಕರ್ಯಲಕ್ರಮಗಳು ಕೇಳಿಬರುತ್ತಿದ್ದರೂ ಕೃಷಿಯನ್ನೇ ಅವಲಂಬಿಸಿದ ಜನಸಂಖ್ಯೆಯ ಶೇ ಎಪ್ಪತ್ತರಷ್ಟು ಇರುವ ಜನತೆಗೆ ಬೇಸಾಯ ಲಾಭದ ವೃತ್ತಿಯಾಗಿ ಉಳಿದಿಲ್ಲ ಎಂಬುದು ವಾಸ್ತವ ಸಂಗತಿ. ಕೇಂದ್ರ ಸರ್ಕಾರ ಪ್ರತಿ ಎರಡು ತಿಂಗಳಿಗೆ ಒಮ್ಮೆ ನೀಡುತ್ತಿರುವ ಎರಡು ಸಾವಿರ ರೂಪಾಯಿ ಪಿಎಂ ಕಿಸಾನ್ ನಿಧಿ ಹೆಚ್ಚುತ್ತಿರುವ ಕೃಷಿ ನಿರ್ವಹಣಾ ವೆಚ್ಚಕ್ಕೆ ಹೋಲಿಸಿದರೆ ಯಾವುದಕ್ಕೂ ಸಾಕಾಗುತ್ತಿಲ್ಲ. ರಾಜ್ಯ ಸರ್ಕಾರ ನೀಡುತ್ತಿದ್ದ ರೈತರ ಪರಿಹಾರ ನಿಧಿ ಅನಿಶ್ಚಿತವಾಗಿದ್ದು ಅದನ್ನು ನೆಚ್ಚಿಕೊಳ್ಳುವ ಸ್ಥಿತಿಯಲ್ಲಿ ರೈತ ಸಮುದಾಯ ಇಲ್ಲ.
ರೈತರು ಆಹಾರ ಧಾನ್ಯಗಳ ಜೊತೆಗೆ ವಾಣಿಜ್ಯ ಉದ್ದೇಶದ ಬೆಳೆಗಳನ್ನು ಅವಲಂಬಿಸಿದ್ದು ಅವುಗಳಿಗೆ ಸೂಕ್ತವಾದ ಧಾರಣೆ ಸಿಗುತ್ತಿಲ್ಲ ಎಂಬುದು ಕೂಡ ವಾಸ್ತವ ಸಂಗತಿ. ಸೊಪ್ಪು, ತರಕಾರಿ ಬೆಳೆಗಳು ಚೆನ್ನಾಗಿ ಬರುವುದಕ್ಕೆ ಮಳೆ ಮತ್ತು ಸೂಕ್ತ ಹವಾಮಾನ ಪರಿಸ್ಥಿತಿ ಅಗತ್ಯವಾಗಿದ್ದು ಒಂದೊಮ್ಮೆ ಒಳ್ಳೆಯ ಇಳುವರಿ ಬಂದ ಸಂದರ್ಭದಲ್ಲಿ ಧಾರಣೆ ಕುಸಿದು ರೈತರು ನಷ್ಟ ಅನುಭವಿಸುವುದು ಸಾಮಾನ್ಯವಾಗಿದೆ. ರೈತರ ನೆರವಿಗಾಗಿ ರೂಪಿಸಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅಧಿಕಾರಿಗಳು, ವರ್ತಕರ ಜೊತೆ ಶಾಮೀಲಾಗಿ ವರ್ತಿಸುವುದರಿಂದ ಅಲ್ಲಿಯೂ ನ್ಯಾಯವಾದ ಧಾರಣೆ ಸಿಗುವುದು ಅಪರೂಪವಾಗುತ್ತಿದೆ.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ಮತ್ತು ಅದಕ್ಕೆ ಕಾನೂನಿನ ರಕ್ಷಣೆ ಇರುವಂತೆ ರೈತ ಸಂಘಟನೆಗಳು ಸರ್ಕಾರಗಳಿಗೆ ಮಾಡುತ್ತಿರುವ ಮನವಿಗಳಿಗೆ ಪುರಸ್ಕಾರ ಸಿಕ್ಕಿಲ್ಲ. ಅಧಿಕಾರವಿಲ್ಲದ ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಈ ಬಗ್ಗೆ ಭರವಸೆ ನೀಡುತ್ತವೆ; ಅಧಿಕಾರಕ್ಕೆ ಬಂದಾಗ ಮರೆಯುತ್ತವೆ, ಇಲ್ಲವೇ ನೆಪಗಳನ್ನು ಮುಂದೆ ಮಾಡಿ ಸಮಸ್ಯೆಯನ್ನೂ ಮುಂದಕ್ಕೆ ತಳ್ಳುತ್ತವೆ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ರೀತಿಯಲ್ಲಿ ಬೆಲೆಯನ್ನು ನಿಗದಿ ಮಾಡಿ, ಅದು ಸಮರ್ಪಕವಾಗಿ ಪಾಲನೆಯಾಗುವಂತೆ ಮಾಡಿದರೆ ರೈತ ಸಮುದಾಯ ಸಂತೃಪ್ತಿಯಿAದ ಬೇಸಾಯದ ಕಾಯಕದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುತ್ತದೆ.
ರಾಜ್ಯದಲ್ಲಿ ರೈತರ ಆದಾಯ ಹೆಚ್ಚಳಕ್ಕೆ ಅನೇಕ ಮಾರ್ಗಗಳಿದ್ದು ಅವುಗಳಿಗೆ ಸರ್ಕಾರದ ಮೂಲಸೌಕರ್ಯಗಳನ್ನು ಒದಗಿಸುವುದು ಅವಶ್ಯಕವಿದೆ. ಹೈನುಗಾರಿಕೆಯಿಂದ ಲಕ್ಷಾಂತರ ಕುಟುಂಬಗಳು ಜೀವನ ನಿರ್ವಹಣೆ ಸಾಧ್ಯವಾಗುತ್ತಿದೆ. ಹೈನುಗಾರಿಕೆ ಸಹಕಾರಿ ವ್ಯವಸ್ಥೆಗೆ ಒಳಪಟ್ಟು ಗ್ರಾಮಮಟ್ಟದಿಂದ ರಾಜ್ಯಮಟ್ಟದವರೆಗೆ ವ್ಯವಸ್ಥಿತವಾಗಿ ವಿಸ್ತರಣೆಯಾಗಿರುವ ಕಾರಣ ಹಾಲಿನ ಉತ್ಪಾದನೆಯೂ ಉತ್ತೇಜನ ಕಾರಿಯಾಗಿದೆ. ನಿತ್ಯ ತೊಂಬತ್ತು ಲಕ್ಷ ಲೀಟರಿನಷ್ಟು ಹಾಲನ್ನು ಸಂಗ್ರಹಿಸಿ, ಸಂಸ್ಕರಿಸಿ ರಾಜ್ಯದಾದ್ಯಂತ ಬಳಕೆದಾರರಿಗೆ ಪೂರೈಸುವ ಕರ್ನಾಟಕ ಹಾಲು ಉತ್ಪಾದಕ ಮಂಡಲಿ (ಕೆಎಂಎಫ್) ದೇಶದಲ್ಲಿ ಹೈನುಗಾರಿಕೆಯನ್ನು ಉದ್ಯಮದಂತೆ ನಿರ್ವಹಿಸುತ್ತಿರುವ ಹೆಗ್ಗಳಿಕೆಯನ್ನು ಪಡೆದಿದೆ. ಗುಜರಾತಿನಲ್ಲಿ ನೆಲೆ ಹೊಂದಿರುವ ಸಹಕಾರಿ ಕ್ಷೇತ್ರದ ಅಮುಲ್ ಮಾದರಿಯಲ್ಲಿ ಹಾಲಿನಿಂದ ವಿವಿಧ ಉತ್ಪನ್ನಗಳನ್ನು ಸಿದ್ಧಪಡಿಸಿ ಪೂರೈಸುತ್ತಿರುವ ಕೆಎಂಎಫ್ ರಾಜ್ಯ ರೈತರ ಪಾಲಿಗೆ ಆಪದ್ಬಾಂಧವನAತಿದೆ.
ಆದರೂ ಪಶು ಆಹಾರದಲ್ಲಿ ಏರುತ್ತಿರುವ ಬೆಲೆ, ದನಗಳನ್ನು ಸಾಕುವುದರಲ್ಲಿ ಆಗಿರುವ ವೆಚ್ಚದ ಹೆಚ್ಚಳ, ಮೇವಿನ ಪೂರೈಕೆಯ ಸಮಸ್ಯೆಯನ್ನು ಎದುರಿಸುತ್ತಿರುವ ಹೈನುಗಾರರು ತಾವು ಪೂರೈಸುತ್ತಿರುವ ಹಾಲಿನ ಧಾರಣೆಯನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಹೈನುಗಾರರ ಮನವಿಗೆ ಈಗಷ್ಟೆ ಸ್ಪಂದಿಸಿರುವ ಮುಖ್ಯಮಂತ್ರಿಯವರು ಹಾಲಿನ ಬೆಲೆಯನ್ನು ಕೊಂಚ ಮಟ್ಟಿಗೆ ಹೆಚ್ಚಿಸಿ ಅದು ಹೈನುಗಾರರಿಗೆ ವರ್ಗವಾಗುವಂತೆ ನೋಡಿಕೊಳ್ಳುವಂತೆ ಸಹಕಾರ ಸಚಿವರಿಗೆ ಸೂಚಿಸಿದ್ದಾರೆ. ಕೆಲವು ದಿನಗಳ ಹಿಂದೆ ಹಾಲಿನ ಉತ್ಪಾದನೆ ಜಾಸ್ತಿಯಾಗಿದ್ದ ಕಾರಣ ನಂದಿನ ಹಾಲಿನ ಒಂದು ಜನಪ್ರಿಯ ಮಾದರಿಯಲ್ಲಿ ಐವತ್ತು ಮಿಲಿ ಲೀಟರ್ ಹಾಲಿನ ಪ್ರಮಾಣವನ್ನು ಹೆಚ್ಚಿಸಿ ಅದಕ್ಕಾಗಿ ಎರಡು ರೂಪಾಯಿ ದರವನ್ನು ನಿಗದಿ ಮಾಡಲಾಗಿತ್ತು. ಸರ್ಕಾರದ ಈ ಕ್ರಮಕ್ಕೆ ಪ್ರತಿಪಕ್ಷಗಳು ತೀವ್ರವಾಗಿ ವಿರೋಧಿಸಿ ಬಳಕೆದಾರರಿಗೆ ಸರ್ಕಾರ ಬೆಲೆ ಏರಿಕೆಯ ಬರೆ ಹಾಕುತ್ತಿದೆ ಎಂದು ಬಣ್ಣಿಸಿದ್ದವು. ವಿರೋಧ ಪಕ್ಷಗಳ ಟೀಕೆಯನ್ನು ಪ್ರಸ್ತಾಪಿಸಿರುವ ಮುಖ್ಯಮಂತ್ರಿಯವರು ರೈತರಿಗೆ ಸಹಾಯವಾಗುವ ಸರ್ಕಾರದ ಯಾವುದೇ ಉಪಕ್ರಮವನ್ನು ಖಂಡಿಸುವ ಮೂಲಕ ತಮ್ಮ ಜನವಿರೋಧಿ ವರ್ತನೆಯನ್ನು ದೃಢಪಡಿಸುತ್ತಿವೆ ಎಂದು ಸರಿಯಾಗಿಯೇ ಬಣ್ಣಿಸಿದ್ದಾರೆ. ಪ್ರತಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸಹಕಾರ ಸಂಘವನ್ನು ಸ್ಥಾಪಿಸಿ ಜನರ ಆರ್ಥಿಕ ಚಟುವಟಿಕೆಗಳು ಚುರುಕಾಗುವುದಕ್ಕೆ ಸರ್ಕಾರ ಮುಂದಾಗಲಿದೆ ಎಂದು ಸಹಕಾರ ಸಚಿವರು ಈಚೆಗಷ್ಟೇ ಮಧುಗಿರಿಯಲ್ಲಿ ಪ್ರಕಟಿಸಿದ್ದಾರೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನೆಪದಲ್ಲಿ ಹೆಚ್ಚಿಸುವ ಹಾಲಿನ ಧಾರಣೆ ತಕ್ಷಣವೇ ಹೈನುಗಾರರಿಗೆ ವರ್ಗಾವಣೆಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ರೈತರಿಗಾಗಿ ಹೆಚ್ಚಿನ ಬೆಲೆಯನ್ನು ನೀಡಲು ಜನ ಸಿದ್ಧರಿರುವಾಗ ಆ ಹೆಚ್ಚಿನ ಮೊತ್ತವನ್ನು ರೈತರಿಗೆ ತಕ್ಷಣವೇ ನೀಡುವ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಬೇಕು.