ಪರೀಕ್ಷೆ ಪ್ರವೇಶ ಪತ್ರದ ಡೌನ್ಲೋಡ್ ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ: ಕೆಪಿಎಸ್ಸಿ ಹಾಗೂ ಸರ್ಕಾರದ ಹುಳುಕು ಬಯಲು: ವಿಜಯೇಂದ್ರ ಕಿಡಿ

ಬೆಂಗಳೂರು: ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ಸೆಪ್ಟೆಂಬರ್ 14 ಮತ್ತು 15ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆಪ್ರವೇಶ ಪತ್ರದ ಡೌನ್ಲೋಡ್ ಪ್ರಕ್ರಿಯೆ ಸ್ಥಗಿತವಾಗಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೆಪಿಎಸ್ಸಿ ಪರೀಕ್ಷೆಯ ಗೊಂದಲಗಳ ನಡುವೆ ಹಠಕ್ಕೆ ಬಿದ್ದವರಂತೆ ಪರೀಕ್ಷೆ ನಡೆಸಿದ್ದ ರಾಜ್ಯ ಸರ್ಕಾರ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ನ್ಯೂನತೆ ಬಯಲಾದ ಬೆನ್ನಲ್ಲೇ ಮತ್ತೆ ಮರು ಪರೀಕ್ಷೆಗೆ ಆದೇಶ ಹೊರಡಿಸಿ ಸಾವಿರಾರು ಪರೀಕ್ಷಾರ್ಥಿಗಳ ಶಾಪಕ್ಕೆ ಗುರಿಯಾಗಿತ್ತು. ಇದೀಗ ಅಂತದ್ದೇ ಮತ್ತೊಂದು ಎಡವಟ್ಟು ಮಾಡಲು ಸರ್ಕಾರ ಮುಂದಾಗಿದೆ. ಸೆಪ್ಟೆಂಬರ್ 22ರಂದು ಯುಪಿಎಸ್ಸಿ ಹಾಗೂ ಎಸ್.ಎಸ್.ಸಿ ಪರೀಕ್ಷೆಗಳ ದಿನಾಂಕ ನಿಗದಿಯಾಗಿದ್ದು, ಅದೇ ದಿನ ಪಿಎಸ್ಐ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಉದ್ಯೋಗಾಕಾಂಕ್ಷಿಗಳ ವಿರೋಧಿ ಧೋರಣೆ ಅಲ್ಲದೆ ಬೇರೇನೂ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ಸೆಪ್ಟೆಂಬರ್ 14 ಮತ್ತು 15ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೆಪ್ಟೆಂಬರ್ 5 ರಂದೇ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಕೆಲವು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳ ಹಂಚಿಕೆಯಲ್ಲಿಯೂ ವ್ಯತ್ಯಯ ಕಂಡುಬಂದಿದ್ದು ತಾತ್ಕಾಲಿಕವಾಗಿ ಪ್ರವೇಶ ಪತ್ರದ ಡೌನ್ಲೋಡ್ ಪ್ರಕ್ರಿಯೆಯನ್ನೂ ಸಹ ಸ್ಥಗಿತಗೊಳಿಸುವ ಮೂಲಕ ಕೆಪಿಎಸ್ಸಿ ಹಾಗೂ ಸರ್ಕಾರದ ಹುಳುಕು ಬಯಲಾಗಿದೆ ಎಂದು ಕಿಡಿಕಾರಿದ್ದಾರೆ.

ಉದ್ಯೋಗವನ್ನು ಅರಸಿ ಪರೀಕ್ಷೆಗಳನ್ನು ಬರೆಯುವ ಉದ್ಯೋಗಾಕಾಂಕ್ಷಿಗಳನ್ನು ಮತ್ತೊಮ್ಮೆ ಸಂಕಷ್ಟಕ್ಕೆ ದೂಡುವ ಮುನ್ನವೇ ರಾಜ್ಯದ ಸರ್ಕಾರ ಸೆಪ್ಟೆಂಬರ್ 22 ರಂದು ನಡೆಸಲು ನಿರ್ಧರಿಸಿರುವ ಪಿಎಸ್ಐ ಪರೀಕ್ಷೆ ಮುಂದೂಡಿಕೆ ಮಾಡಿ ಹಾಗೂ ಗ್ರೂಪ್ ಬಿ ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಹಾಗೂ ಪರೀಕ್ಷಾ ಕೇಂದ್ರಗಳ ಗೊಂದಲ ನಿವಾರಿಸಿ ಪರೀಕ್ಷಾರ್ಥಿಗಳಿಗೆ ತೊಂದರೆಗಳಾಗದಂತೆ ಎಚ್ಚರ ವಹಿಸುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *