ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಗೆ ಗುಂಡಿಕ್ಕಿ ಕೊಂದು ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಲೂರು ತಾಲೂಕಿನ ದೊಡ್ಡಸಾಲಾವರ ಗ್ರಾಮದಲ್ಲಿ ನಡೆದಿದೆ. ಜಾಜಿ (45) ಕೊಲೆಯಾದ ಪತ್ನಿ, ಹರೀಶ್ (50) ಕೊಲೆ ಬಳಿಕ ಆತ್ಮಹತ್ಯೆ ಮಾಡಿಕೊಂಡ ಪತಿ.
ಪ್ರತಿದಿನ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದ ದಂಪತಿ, ಜೂ.17ರ ರಾತ್ರಿಯೂ ಗಲಾಟೆ ಮಾಡಿಕೊಂಡಿರುವ ಮಾಹಿತಿ ಇದೆ. ಇದು ವಿಕೋಪಕ್ಕೆ ತಿರುಗಿದ್ದರಿಂದ ಮನೆಯಲ್ಲಿದ್ದ ಬಂದೂಕಿನಿಂದ ಹರೀಶ್ ತನ್ನ ಪತ್ನಿ ಜಾಜಿಗೆ ಗುಂಡಿಕ್ಕಿದ್ದಾನೆ. ಬಳಿಕ ತಾನು ನೇಣಿಗೆ ಶರಣಾಗಿರುವ ಮಾಹಿತಿ ಲಭ್ಯವಾಗಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.