ಬೆಂಗಳೂರು: ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದರು.
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಚಲನಚಿತ್ರ ನಿರ್ಮಾಪಕರಿಗೆ ಇಲ್ಲಿಯವರೆಗೆ ಸ್ವಂತ ಕಟ್ಟಡ ಇರಲಿಲ್ಲ. ಸ್ವಂತ ಕಟ್ಟಡ ನಿರ್ಮಾಣವಾಗಿದ್ದು, ಅದರ ಉದ್ಘಾಟನೆಯನ್ನು ನೆರವೇರಿಸಿದ್ದೇನೆ. ಪ್ರಧಾನಿ ಮೋದಿಯವರು ನಿನ್ನೆ ರಾತ್ರಿ 8 ಗಂಟೆಗೆ ಸಮಯ ಕೊಟ್ಟಿದ್ದರು. ಈ ಕಾರ್ಯಕ್ರಮಕ್ಕಾಗಿ ನಿನ್ನೆಯೇ ದೆಹಲಿಯಿಂದ ಹೊರಟು ಉದ್ಘಾಟನೆ ತಪ್ಪಿಸಬಾರದೆಂದು ಆಗಮಿಸಿದ್ದೇನೆ ಎಂದು ಹೇಳಿದರು.
1972 ರಿಂದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದವರು ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹಳ ಕಷ್ಟದ ದಿನಗಳಿದ್ದರೂ ಕೂಡ ಚಲನಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ನಿರ್ಮಾಪಕರಿಗೆ ಅಭಿನಂದಿಸುತ್ತೇನೆ. ಕಟ್ಟಡವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ. ಆರ್ಥಿಕ ಸಹಾಯವನ್ನು ಸಂಘ ಕೇಳಿಯೇ ಇಲ್ಲ. ಸರ್ಕಾರದಿಂದ ಆರ್ಥಿಕ ಸಹಾಯ ಮಾಡಿಯೇ ಮಾಡುತ್ತದೆ ಎಂದು ತಿಳಿಸಿದರು. ಇದೇ ವೇಳೆ ಕನ್ನಡ ಒಟಿಟಿ ವೇದಿಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ಚಿತ್ರ ನಿರ್ಮಾಪಕರಿಗೆ ಭರವಸೆ ನೀಡಿದರು.
ನೆರೆಯ ತೆಲಂಗಾಣದ ಹೈದರಾಬಾದ್‌ನಲ್ಲಿ ಫಿಲಂ ಸಿಟಿ ಇದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಚಿತ್ರನಗರಿ ನಿರ್ಮಿಸಬೇಕೆಂಬುದು ಡಾ.ರಾಜ್‌ಕುಮಾರ್ ಅವರ ಕನಸಾಗಿತ್ತು. ಇದಕ್ಕಾಗಿ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.