ಬೆಂಗಳೂರು: ಪುನರಾಭಿವೃದ್ಧಿ ಯೋಜನೆಯಡಿ ನಗರದ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ 367 ಕೋಟಿ ರೂ. ಮತ್ತು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ 486 ಕೋಟಿ ರೂ. ಮೀಸಲಿಡಲಾಗಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಭಾನುವಾರ ಹೇಳಿದರು.
ಭಾನುವಾರ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಪುನರಾಭಿವೃದ್ಧಿ ಯೋಜನೆಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳು ಕರ್ನಾಟಕದ ರೈಲ್ವೆ ನೆಟ್ವರ್ಕ್ನಲ್ಲಿ ಪ್ರಮುಖ ಕೇಂದ್ರಗಳಾಗಿವೆ. ಈ ರೈಲ್ವೆ ನಿಲ್ದಾಣಗಳ ಮೂಲಸೌಕರ್ಯದ ಸಂಬಂಧ ಹೊಸ ಮಾನದಂಡಗಳನ್ನು ಸ್ಥಾಪಿಸಲು ಸಜ್ಜಾಗಿದ್ದೇವೆ. ಪ್ರಯಾಣಿಕರ ಸೌಕರ್ಯ, ಅನುಕೂಲತೆ, ಸುರಕ್ಷತೆ ಮತ್ತು ಪ್ರಯಾಣಿಕರಿಗೆ ಆರಾಮದಾಯಕ ಕಾಯುವ ಪ್ರದೇಶ, ಮಲ್ಟಿ-ಲೆವೆಲ್ ಪಾರ್ಕಿಂಗ್, ಮಕ್ಕಳಿಗಾಗಿ ಆಟದ ವಲಯ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ. ಸ್ಥಳೀಯ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡುವ ವ್ಯವಸ್ಥೆ ಸೇರಿದಂತೆ ಎರಡೂ ನಿಲ್ದಾಣಗಳನ್ನು ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು
ನಿಲ್ದಾಣದ ಆವರಣದೊಳಗೆ ಹೆಚ್ಚಿನ ಹಸಿರು ಅಳವಡಿಸಲು, ಪ್ರಯಾಣಿಕರ ತಂಗುದಾಣಗಳಿಗೆ ಸೌಲಭ್ಯಗಳನ್ನು ವಿಸ್ತರಿಸಲು ಮತ್ತು ಯಶವಂತಪುರದ ಕಾಮಗಾರಿಯನ್ನು ಸಹ ಸಕಾಲದಲ್ಲಿ ಪೂರ್ಣಗೊಳಿಸಿ ನಿರ್ಮಾಣದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.