ಕೊಪ್ಪಳ: ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಚರ್ಚೆಯಾಗಿದ್ದ ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಂತಿಮ ತೀರ್ಪು ಪ್ರಕಟವಾಗಿದೆ. ಸಚಿವ ಶಿವರಾಜ ತಂಗಡಗಿ ಆಪ್ತ ಹನುಮೇಶ್ ನಾಯಕ್ ಸೇರಿದಂತೆ ಎಲ್ಲಾ 9 ಆರೋಪಿಗಳನ್ನು ಕೇಸ್ನಿಂದ ಖುಲಾಸೆ ಮಾಡಲಾಗಿದೆ. ಸೂಕ್ತ ಸಾಕ್ಷ್ಯಾಧಾರ ಇಲ್ಲದ ಹಿನ್ನೆಲೆಯಲ್ಲಿ ಕೇಸ್ ಖುಲಾಸೆ ಮಾಡಿ ಕೊಪ್ಪಳ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ಶುಕ್ರವಾರ ಆದೇಶ ಹೊರಡಿಸಲಾಗಿದೆ.
ಸಚಿವ ಶಿವರಾಜ ತಂಗಡಗಿ ಆಪ್ತ ಹನುಮೇಶ್ ನಾಯಕ್, ಮಹಾಂತೇಶ್ ನಾಯಕ್, ಮನೋಜ್ ಪಾಟೀಲ್, ಬಾಳನಗೌಡ, ಕಾಡ ಮಂಜ, ಯಮನೂರಪ್ಪ, ದುರ್ಗಪ್ಪ, ನಂದೀಶ್, ಪರಶರಾಮ್ ಕೇಸ್ನಿಂದ ಖುಲಾಸೆಗೊಂಡವರು.
ಶಿವರಾಜ್ ತಂಗಡಗಿ ಸಲುವಾಗಿ ನನ್ನ ಜೈಲಿಗೆ ಹಾಕಿದ್ರು: ಹನುಮೇಶ್ ನಾಯಕ್
ಈ ಕುರಿತಾಗಿ ಟಿವಿ9 ಜೊತೆಗೆ ಸಚಿವ ಶಿವರಾಜ ತಂಗಡಗಿ ಆಪ್ತ ಹನುಮೇಶ್ ನಾಯಕ್ ಮಾತನಾಡಿದ್ದು, ನ್ಯಾಯದೇವತೆ ನಮಗೆ ನ್ಯಾಯ ಒದಗಿಸಿದ್ದಾಳೆ. ಬಹಳ ಸಂತೋಷ ಆಗಿದೆ. ಇದು ಸುಳ್ಳು ಕೇಸ್. ಶಿವರಾಜ್ ತಂಗಡಗಿ ಗೆದ್ದಿದ್ದು ನನ್ನ ಕ್ಷೇತ್ರದಿಂದ. ನನ್ನ ಮೇಲೆ ಸುಳ್ಳು ಆರೋಪ ಮಾಡಿದರು. ಶಿವರಾಜ್ ತಂಗಡಗಿ ಸಲುವಾಗಿ ನನ್ನ ಜೈಲಿಗೆ ಹಾಕಿದ್ದರು ಎಂದರು.
ಯಲ್ಲಾಲಿಂಗನದು ಕೊಲೆ ಅಲ್ಲ, ಆತ್ಮಹತ್ಯೆ: ಆತನ ಅಣ್ಣನೇ ಸಾಕ್ಷಿ ಹೇಳಿದ್ದಾನೆ ಎಂದ ವಕೀಲ
ಇನ್ನು ಹನುಮೇಶ್ ನಾಯಕ್ ಪರ ವಕೀಲ ಗಂಗಾಧರ್ ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿ ಯಲ್ಲಾಲಿಂಗ ಕೇಸ್ ಇದು ಕೊಲೆಯಲ್ಲ, ಆತ್ಮಹತ್ಯೆ. ಯಲ್ಲಾಲಿಂಗನ ಅಣ್ಣನೇ ನ್ಯಾಯಾಲಯಕ್ಕೆ ಹೇಳಿದ್ದಾನೆ. ಅದೇ ಆಧಾರದ ಮೇಲೆ ಆರೋಪಿಗಳು ನಿರ್ದೋಷಿ ಆಗಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರ. ಕೊಲೆಯಲ್ಲಿ ಹನುಮೇಶ್ ನಾಯಕ ಪತ್ರ ಇಲ್ಲ ಎಂದಿದ್ದಾರೆ.
ಪೊಲೀಸರು ಹನುಮೇಶ್ ನಾಯಕ್ ಹಾಗೂ ಸಂಗಡಿಗರ ಮೇಲೆ ಚಾರ್ಜ್ ಶೀಟ್ ಹಾಕಿದ್ದರು. ಸುದೀರ್ಘ ವಿಚಾರಣೆ ಬಳಿಕ ಇಂದು ನ್ಯಾಯಾಲಯ ನಿರಾಪರಾಧಿ ಎಂದು ತೀರ್ಪು ನೀಡಿದೆ. 76 ಜನರ ಪೈಕಿ 50 ಸಾಕ್ಷಿ ಅಭಿಯೋಜಕರ ಪರವಾಗಿ ಹೇಳಿಲ್ಲ. ಇದನ್ನ ನ್ಯಾಯಾಲಯ ಮನಗಂಡು ತೀರ್ಪು ನೀಡಿದೆ ಎಂದು ವಕೀಲ ಗಂಗಾಧರ್ ಹೇಳಿದ್ದಾರೆ.
ಪ್ರಕರಣ ಹಿನ್ನಲೆ
ಕನಕಗಿರಿ ತಾಲೂಕಿನ ಕನಕಾಪುರ ಗ್ರಾಮದ ನಿವಾಸಿಯಾಗಿದ್ದ ವಿದ್ಯಾರ್ಥಿ ಯಲ್ಲಾಲಿಂಗ, ತಮ್ಮೂರಿನ ಭ್ರಷ್ಟಾಚಾರ ಕುರಿತು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದ. ಬಳಿಕ 2015 ಜನವರಿ 11ರಂದು ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಯಲ್ಲಾಲಿಂಗ ಮೃತದೇಹ ಪತ್ತೆ ಆಗಿತ್ತು. ಮೊದಲಿಗೆ ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು.
ಯಲ್ಲಾಲಿಂಗ ಕೊಲೆಗೆ ಕಾರಣರಾದವರ ಹೆಸರನ್ನು ಡೆತ್ ನೋಟ್ನಲ್ಲಿ ಬರೆದಿದ್ದ, ಆದರೆ ಪೊಲೀಸರು ಈ ವಿಷಯ ಮುಚ್ಚಿ ಹಾಕಿದ್ದರು. ಮೊದಲು ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಕೊಪ್ಪಳ ನಗರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಯಾವಾಗ ದೂರಿನಲ್ಲಿ ತಂಗಡಗಿ ಆಪ್ತ ಹನುಮೇಶ್ ನಾಯಕ್ ಹೆಸರು ಕೇಳಿಬರುತ್ತೋ, ಅಲ್ಲಿಂದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿತ್ತು.
ಬಳಿಕ ಸಚಿವ ಶಿವರಾಜ ತಂಗಡಗಿ ಆಪ್ತ ಹನುಮೇಶ್ ನಾಯಕ್, ಮಹಾಂತೇಶ್ ನಾಯಕ್, ಮನೋಜ್ ಪಾಟೀಲ್, ಬಾಳನಗೌಡ, ಕಾಡ ಮಂಜ, ಯಮನೂರಪ್ಪ, ದುರ್ಗಪ್ಪ, ನಂದೀಶ್ ಮತ್ತು ಪರಶರಾಮ್ ವಿರುದ್ಧ ಕೇಸ್ ದಾಖಲಾಗಿತ್ತು. ಈ ಹಿಂದೆ ಇದೇ ಕೇಸ್ನಲ್ಲಿ ಶಿವರಾಜ ತಂಗಡಗಿ ಸಚಿವಸ್ಥಾನ ಕಳೆದುಕೊಂಡಿದ್ದರು. ಇದೀಗ 10 ವರ್ಷ 8 ತಿಂಗಳ ನಂತರ ಸೆಷನ್ಸ್ ಕೋರ್ಟ್ 9 ಆರೋಪಿಗಳನ್ನು ಕೇಸ್ನಿಂದ ಖುಲಾಸೆಗೊಳಿ ತೀರ್ಪು ಪ್ರಕಟಿಸಿದೆ.
For More Updates Join our WhatsApp Group :
