ಜಿ.ಎಂ.ಸಣ್ಣಮುದ್ದಯ್ಯನವರು ಹೃದಯಾಘಾತದಿಂದ ನಿಧನ
ತುಮಕೂರು : ನಿವೃತ್ತ ತಹಶೀಲ್ದಾರ್ ಹಾಗೂ ತುಮಕೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಜಿ.ಎಂ.ಸಣ್ಣಮುದ್ದಯ್ಯನವರು(72) ನಿಧನ ಹೊಂದಿದ್ದಾರೆ. ಇಂದು ಬೆಳಗಿನ ಜಾವ ಅವರ ಮನೆಯಲ್ಲಿಯೇ ಹೃದಯಾಘಾತದಿಂದ ಮಲಗಿದಲ್ಲಿಯೇ ನಿಧನ ಹೊಂದಿದ್ದು, ಇವರು ತುಮಕೂರು ಜಿಲ್ಲೆಯ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಕಾಲದಲ್ಲಿ ಸಂಘಕ್ಕೆ ಭದ್ರ ಬುನಾದಿ ಹಾಕಿದ್ದಲ್ಲದೆ ಒಂದು ಘನತೆ, ಶಿಸ್ತನ್ನು ತಂದು ಕೊಟ್ಟರು.
ಸಣ್ಣಮುದ್ದಯ್ಯನವರು ಸಂಘದ ಅಧ್ಯಕ್ಷರಾಗುವ ತನಕ ಸರ್ಕಾರಿ ನೌಕರರಿಗೆ ಒಂದು ಸಂಘವಿದೆ ಎಂಬುದೂ ಸಹ ಸಾರ್ವಜನಿಕರಿಗೆ ತಿಳಿದಿರಲಿಲ್ಲ, ಜಿ.ಎಂ.ಸಣ್ಣಮುದ್ದಯ್ಯನವರು ಅಧ್ಯಕ್ಷರಾದ ಮೇಲೆ ನೌಕರರ ಹಲವಾರು ಬೇಡಿಕೆಗೆ ಯಾವುದೇ ಮುಲಾಜಿಲ್ಲದೆ ಪ್ರತಿಭಟನೆ, ಧರಣಿಗಳನ್ನು ಮಾಡುವ ಮೂಲಕ ನೌಕರರ ಬೇಡಿಕೆಗಳಿಗೆ ಸ್ಪಂದಿಸಿದವರು.
ಸತತ ಐದು ಬಾರಿ ಸರ್ಕಾರಿ ನೌಕರರ ತುಮಕೂರು ಜಿಲ್ಲಾಧ್ಯಕ್ಷರಾಗಿ ಹಾಗೂ ಒಂದು ಬಾರಿ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ತಹಶೀಲ್ದಾರ್ ಗ್ರೇಡ್-2 ಆಗಿದ್ದ ಕಾಲದಲ್ಲಿ ಜಾತಿ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ಇದ್ದ ತೊಡಕುಗಳನ್ನು ನೀವಾರಿಸಿ ಸುಧಾರಣೆಯನ್ನು ತಂದು ಬಡ ಜನರಿಗೆ ಒತ್ತಾಸೆಯಾಗಿ ಕಾರ್ಯನಿರ್ವಹಿಸಿದರು.ಇವರು ನಿವೃತ್ತಿ ಹೊಂದಿದಾಗ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸರ್ಕಾರಿ ನೌಕರರ ಅಂದಿನ ಅಧ್ಯಕ್ಷರನ್ನು ಕರೆಸಿ ಅದ್ಧೂರಿ ಸಮಾರಂಭದ ಮೂಲಕ ಸಣ್ಣಮುದ್ದಯ್ಯನವರಿಗೆ ಬೀಳ್ಕೊಡಿಗೆ ನೀಡಿ ಗೌರವಿಸಿದ್ದರು.
ಹಲವಾರು ವರ್ಷಗಳ ಹಿಂದೆಯೇ ಬೈಪಾಸ್ ಸರ್ಜರಿಗೆ ಒಳಗಾಗಿದ್ದ ಜಿ.ಎಂ.ಸಣ್ಣಮುದ್ದಯ್ಯನವರು ನಿವೃತ್ತಿಯ ನಂತರ ತುಮಕೂರಿನಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದರು, ಬೆಳಿಗ್ಗೆ ಇದ್ದಕ್ಕಿದಂತೆ ನಿಧನ ಹೊಂದಿರುವುದು ಸರ್ಕಾರಿ ನೌಕರರಿಗೆ, ಅವರ ಅಭಿಮಾನಿಗಳಿಗೆ ಅಘಾತವನ್ನುಂಟು ಮಾಡಿದೆ.
ಮೃತರು ಪತ್ನಿ ಇಂದಿರಮ್ಮ ಮತ್ತು ಮಗ ಹಾಗೂ ಅಪಾರ ಬಂಧು-ಬಳಗ, ಸ್ನೇಹಿತರು, ಹಿತೈಶಿಗಳನ್ನು ಅಗಲಿದ್ದಾರೆ.
For More Updates Join our WhatsApp Group :




