ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚಕರ ಹಾವಳಿ ಹೆಚ್ಚಾಗುತ್ತಿದೆ. ಗೂಗಲ್ ಪೇ, ಫೋನ್ ಪೇ ಮಾಡುತ್ತೇವೆ ಎಂದು ಕಣ್ಮುಂದೆಯೇ ನಕಲಿ ಆಪ್ ಗಳ ಮೂಲಕ ಹಣ ಪಾವತಿಸಿದಂತೆ ತೋರಿಸಿ ನಾಟಕವಾಡಿ, ಹಣ ದೋಚುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಬೆಳಕಿಗೆ ಬರುತ್ತಿದ್ದು, ಜನರು ಎಷ್ಟು ಎಚ್ಚತ್ತುಕೊಂಡರೂ ಕಡಿಮೆಯೇ.
ಇಲ್ಲೋರ್ವ ಯುವಕ ತನಗೆ ಮೆಡಿಕಲ್ ಎಮರ್ಜೆನ್ಸಿ ಇದೆ ಅರ್ಜಂಟಾಗಿ ಕ್ಯಾಶ್ ಬೇಕು ನಿಮಗೆ ಫೋನ್ ಪೇ ಮೂಲಕ ಹಣ ಪಾವತಿಸುತ್ತೇನೆ ಎಂದು ಹೇಳಿ ಅಂದ್ರಹಳ್ಳಿಯ ಸೈಬರ್ ಸೆಂಟರ್ ಮಾಲೀಕನಿಗೆ ವಂಚಿಸಿ ಪರಾರಿಯಾಗಿದ್ದಾನೆ.
ಸೈಬರ್ ಸೆಂಟರ್ ಗೆ ಬಂದ ಯುವಕ, ಮೆಡಿಕಲ್ ಎಮರ್ಜನ್ಸಿ ಇದೆ 10,000 ರೂ ಕ್ಯಾಶ್ ಬೇಕು. ಇಲ್ಲ 5,000 ರೂಪಾಯಿ ಆದರೂ ಬೇಕೇ ಬೇಕು. ನಿಮ್ಮ ಅಕೌಂಟ್ ಗೆ ಫೋನ್ ಪೇ ಅಥವಾ ಗೂಗಲ್ ಪೇ ಮಾಡುತ್ತೇನೆ ಎಂದು ಹೇಳಿದ್ದಾನೆ. ಅಲ್ಲದೇ ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಿ ನೆಟ್ ಆಫ್ ಮಾಡಿದ್ದಾನೆ. ಬಳಿಕ ಸ್ಕ್ಯಾನರ್ ವರ್ಕ್ ಆಗ್ತಿಲ್ಲ ಎಂದು ಹೇಳಿ ಮೊಬೈಲ್ ನಂಬರ್ ಗೆ ಹಣ ಹಾಕುತ್ತೇನೆ ಎಂದು ಹೇಳಿ ಫೇಕ್ ಆಪ್ ಮೂಲಕ ಪೇಮೆಂಟ್ ಸಕ್ಸಸ್ ಎನ್ನುವ ಸ್ಕ್ರೀನ್ ಶಾಟ್ ತೋರಿಸಿ ಕ್ಯಾಶ್ ಪಡೆದು ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾನೆ.
ಮಾಲೀಕ ಮೊಬೈಲ್ ಚೆಕ್ ಮಾಡಿದಾಗ ಖಾತೆಗೆ ಹಣ ಬಂದಿಲ್ಲ. ವಂಚಕನ ವಂಚನೆ ಸೈಬರ್ ಸೆಂಟರ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಲೀಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದು, ಆನ್ ಲೈನ್ ಮೂಲಕ ಪೇ ಮಾಡುತ್ತೇವೆ, ಮೊಬೈಲ್ ನಲ್ಲಿ ಪೇ ಮಾಡುತ್ತೇವೆ ಎಂದು ಈ ರೀತಿ ಮೋಸ ಮಾಡುತ್ತಾರೆ. ಯಾರೂ ನಂಬಿ ಮೋಸ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.
ವಂಚಕ ಯುವಕ ಅಂದ್ರಹಳ್ಳಿ, ತಿಗಳರ ಪಾಳ್ಯ ಸುತ್ತಮುತ್ತಲಿನ ಅಂಗಡಿಗಳಿಗೂ ಇದೇ ರೀತಿ ನಾಟಕವಾಡಿ ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.