ಪುಣೆ: ಮಹಾರಾಷ್ಟ್ರದ ವಿವಾದಿತ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ ಅವರಿಗೆ ಪುಣೆ ಮಹಾನಗರ ಪಾಲಿಕೆ ಶನಿವಾರ ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳಲ್ಲಿ ತಮ್ಮ ಬಂಗಲೆಯ ಗೋಡೆಯ ಪಕ್ಕದಲ್ಲಿರುವ “ಅನಧಿಕೃತ ಕಟ್ಟಡಗಳನ್ನು” ತೆರವುಗೊಳಿಸುವಂತೆ ಸೂಚಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೂ ವಿವಾದಕ್ಕೆ ಸಂಬಂಧಿಸಿದಂತೆ ಮನೋರಮಾ ಅವರು ಕೆಲವು ವ್ಯಕ್ತಿಗಳಿಗೆ ಬಂದೂಕಿನಿಂದ ಬೆದರಿಕೆ ಹಾಕುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಐಎಎಸ್ ಪ್ರೊಬೇಷನರ್ ಅಧಿಕಾರಿಯ ತಾಯಿ ಮನೋರಮಾ ಮತ್ತು ತಂದೆ ದಿಲೀಪ್ ಖೇಡ್ಕರ್ ಹಾಗೂ ಇತರ ಐವರ ವಿರುದ್ಧವೂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇಂದು ಸಂಜೆ, ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ನಗರದ ಬ್ಯಾನರ್ ರಸ್ತೆಯಲ್ಲಿರುವ ‘ಓಂ ದೀಪ್’ ಬಂಗಲೆಯಲ್ಲಿ ಮನೋರಮಾ ಖೇಡ್ಕರ್ ಅವರಿಗೆ ನೋಟಿಸ್ ನೀಡಲು ಪ್ರಯತ್ನಿಸಿದರು. ಆದರೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಅಧಿಕಾರಿಗಳು ಬಂಗಲೆಯ ಮುಖ್ಯ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ.
“ನಿಮ್ಮ ಬಂಗಲೆಯ ಹೊರಗೆ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡದಿಂದ ಜನರಿಗೆ ಅಡಚಣೆ ಉಂಟುಮಾಡುವ ಬಗ್ಗೆ ನಮಗೆ ದೂರು ಬಂದಿದೆ. ಮುಂದಿನ ಏಳು ದಿನಗಳಲ್ಲಿ ಬಂಗಲೆಯ ಗೋಡೆಯ ಪಕ್ಕದಲ್ಲಿರುವ ಅನಧಿಕೃತ ಕಟ್ಟಡಗಳನ್ನು ದಯವಿಟ್ಟು ತೆರವುಗೊಳಿಸಿ” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
34 ವರ್ಷದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ತಮ್ಮ ಖಾಸಗಿ ಆಡಿ ಕಾರಿಗೆ ಸೈರನ್ ಹಾಗೂ ಸರ್ಕಾರಿ ಫಲಕ ಅಳವಡಿಸಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನಲ್ಲೇ ಅವರನ್ನು ಅಧಿಕಾರ ದುರುಪಯೋಗದ ಆರೋಪದ ಮೇಲೆ ಪುಣೆಯಿಂದ ವಾಶಿಮ್‌ಗೆ ವರ್ಗಾವಣೆ ಮಾಡಲಾಗಿದೆ.