ಅಗತ್ಯಬಿದ್ದರೆ PTCL ಕಾಯ್ದೆಗೆ ತಿದ್ದುಪಡಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕರ್ನಾಟಕ ಬಿಟ್ಟು ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಪಿಟಿಸಿಎಲ್​ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯಬಿದ್ದರೆ ಖಂಡಿತವಾಗಿಯೂ ತಿದ್ದುಪಡಿ ತರಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶನಿವಾರ ಸಮಾಜ ಕಲ್ಯಾಣ ಇಲಾಖೆ ಮತ್ತು ಡಾ.ಬಾಬು ಜಗಜೀವನ್​​ ರಾಮ್​ ಸಂಶೋಧನಾ ಸಂಸ್ಥೆ ವತಿಯಿಂದ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ‘ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್​ ರಾಮ್ ಭವನ’ವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ಬ್ಯಾಂಕ್​ಗಳಲ್ಲಿ, ಕೆ.ಎಸ್.ಎಫ್​.ಸಿ, ಉದ್ಯಮಿಗಳಿಗೆ 10 ಕೋಟಿವರೆಗೆ 4% ಬಡ್ಡಿಗೆ ಸಾಲ ದೊರೆಯಬೇಕೆಂಬ ಸೌಲಭ್ಯ ಒದಗಿಸಿದ್ದು ನಮ್ಮ ಸರ್ಕಾರ. ಎಸ್.ಸಿ.ಎಸ್​​ಪಿ/ಟಿ.ಎಸ್.ಪಿ ಕಾಯ್ದೆಯಡಿ 7(ಡಿ) ಕೈಬಿಡಲು ಸಲಹೆ ಬಂದ ಮೇರೆಗೆ ಕಾಯ್ದೆಗೆ ತಿದ್ದುಪಡಿ ತಂದು ಅದನ್ನು ಕೈಬಿಡಲಾಗಿದೆ. ಇನ್ನೂ ಬದಲಾವಣೆಗಳು ಅಗತ್ಯವಿದ್ದರೆ ಮಾಡಲಾಗುವುದು. ನಮಗೆ ಯಾವುದೇ ಸಂಪ್ರದಾಯವಾದಿ ಧೋರಣೆಗಳಿಲ್ಲ. ಪರಿಶಿಷ್ಟರ ಸಾಮಾಜಿಕ ನ್ಯಾಯದ ವಿರುದ್ಧವಾದ ನಿಲುವು ಸರ್ಕಾರಕ್ಕಿಲ್ಲ” ಎಂದು ಸ್ಪಷ್ಟಪಡಿಸಿದರು.

ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಅನುದಾನ: “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಅಭಿವೃದ್ಧಿಗಾಗಿ, ಅವರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬಲು, ಅವರ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಅನುದಾನವನ್ನು ಖರ್ಚು ಮಾಡಲು ನಾವು ಹಿಂದಿನ ಬಾರಿ ಅಧಿಕಾರದಲ್ಲಿದ್ದಾಗ ಕಾಯ್ದೆ ರೂಪಿಸಿದ್ದೆವು. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಟ್ಟು ಜನಸಂಖ್ಯೆ ಶೇ.24.01ರಷ್ಟಿದೆ. ಈ ವರ್ಷ ಬಜೆಟ್‌ನಲ್ಲಿ ಅಭಿವೃದ್ಧಿಗಾಗಿ 1.60 ಲಕ್ಷ ಕೋಟಿ ರೂ. ಅನುದಾನವನ್ನು ಒದಗಿಸಿದ್ದು, ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ 39,121 ಕೋಟಿ ರೂ. ಒದಗಿಸಿದ್ದೇವೆ. ಈ ಕುರಿತು ಕಾಯ್ದೆ ರಚಿಸದಿದ್ದರೆ, ಇಷ್ಟು ದೊಡ್ಡ ಅನುದಾನವನ್ನು ಒದಗಿಸಲು ನಮಗೆ ಸಾಧ್ಯವಾಗುತ್ತಿರಲಿಲ್ಲ” ಎಂದರು.

ಕೇಂದ್ರದಲ್ಲಿಯೂ ಕಾಯ್ದೆ ಜಾರಿಗೊಳಿಸಬೇಕು: “ನಾವು ಒದಗಿಸಿರುವ ಅನುದಾನ ಅದೇ ವರ್ಷ ಶೇ. 100ರಷ್ಟು ವೆಚ್ಚವಾಗಬೇಕು. ಯಾವುದೇ ಕಾರಣಕ್ಕೂ ಈ ಅನುದಾನ ಲೋಪವಾಗಲು ಅವಕಾಶ ನೀಡಬಾರದು. ಯಾವುದಾದರೂ ಸಕಾರಣದಿಂದ ಅನುದಾನ ಸಂಪೂರ್ಣ ವೆಚ್ಚವಾಗದೇ ಉಳಿದರೆ, ಆ ಅನುದಾನ ಮುಂದಿನ ವರ್ಷಕ್ಕೂ ಮುಂದುವರೆಯುತ್ತದೆ. ಕೇಂದ್ರದಲ್ಲಿಯೂ ಇಂತಹ ಕಾಯ್ದೆಯನ್ನು ಜಾರಿಗೊಳಿಸಲು ಎಲ್ಲರೂ ಒತ್ತಡ ಹೇರಬೇಕು” ಎಂದು ಆಗ್ರಹಿಸಿದರು

Leave a Reply

Your email address will not be published. Required fields are marked *