ಕಲಬುರಗಿ: ಭಾನುವಾರ ಕಲಬುರಗಿಯಲ್ಲಿ ನಡೆದ ಘಟನೆಯೊಂದು ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ರೈತ ಯುವಕನೊಬ್ಬ ಹಾಳಾದ ತೊಗರಿ ಬೆಳೆಯನ್ನು ತೋರಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತನ್ನ ನೋವು ಹೇಳಿಕೊಂಡಾಗ, ಖರ್ಗೆ ಅವರ ಪ್ರತಿಕ್ರಿಯೆ ಎಲ್ಲರನ್ನೂ ಅಚ್ಚರಿಗೊಳಿಸಿದೆ.
“ನಾಲ್ಕು ಎಕರೆ ಪ್ರದೇಶದ ತೊಗರಿ ಹಾಳಾಗಿದೆ ಸರ್” ಎಂದು ಯುವಕ ಹೇಳಿದ ಕ್ಷಣ, ಖರ್ಗೆ ತೀವ್ರವಾಗಿ ಪ್ರತಿಕ್ರಿಯಿಸಿ – “ಆರು ಹಡೆದವಳ ಮುಂದೆ ಮೂರು ಹಡೆದವಳು ಹೇಳಿದಂತಾಗಿದೆ. ನನ್ನ ನಲವತ್ತು ಎಕರೆ ತೊಗರಿ, ಹೆಸರು, ಉದ್ದು, ಹತ್ತಿ, ಸೂರ್ಯಕಾಂತಿ ಬೆಳೆಗಳು ಹಾಳಾಗಿವೆ. ಪ್ರಚಾರಕ್ಕಾಗಿ ಬರುವ ಅಗತ್ಯವಿಲ್ಲ. ಹೋಗಿ ಮೋದಿ, ಅಮಿತ್ ಶಾ ಬಳಿ ಕೇಳಿ ಎಂದಿದ್ದಾರೆ.
ಖರ್ಗೆ ಅವರ ಈ ವರ್ತನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ಖರ್ಗೆ ಹೇಳಿದ್ದರೂ, ರೈತನ ನೋವನ್ನು ಕಡೆಗಣಿಸಿದ ರೀತಿಯು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಖರ್ಗೆಯ ವರ್ತನೆಯನ್ನು ಖಂಡಿಸಿದ್ದಾರೆ. “ರೈತರ ನೋವನ್ನು ಅಸಹನೆಯಿಂದ ತಳ್ಳಿ ಹಾಕಿದದ್ದು, ಖರ್ಗೆಯವರ ಉಡಾಫೆ ಧೋರಣೆ ಮತ್ತು ರೈತ ವಿರೋಧಿ ಮನೋಭಾವವನ್ನು ತೋರಿಸುತ್ತದೆ. ಸ್ವಾತಂತ್ರ್ಯಾನಂತರ ಕಾಂಗ್ರೆಸ್ ರೈತರ ಸಂಕಷ್ಟ ನಿವಾರಣೆಗೆ ಏನೂ ಮಾಡಲಿಲ್ಲ. ನಿನ್ನೆ ನಡೆದ ಘಟನೆ ಅದಕ್ಕೆ ಸಾಕ್ಷಿ ಎಂದು ಟೀಕಿಸಿದ್ದಾರೆ.ಈ ಬೆಳವಣಿಗೆಯೊಂದಿಗೆ, ರೈತ ಹಿತಾಸಕ್ತಿಯ ವಿಚಾರದಲ್ಲಿ ಕಾಂಗ್ರೆಸ್ ಎದುರಿಸುತ್ತಿರುವ ರಾಜಕೀಯ ಒತ್ತಡ ಮತ್ತಷ್ಟು ಗಾಢವಾಗಿದೆ.
For More Updates Join our WhatsApp Group :