ಬೆಂಗಳೂರು: ರಾಜ್ಯ ಸರ್ಕಾರ ನೇಕಾರರಿಗೆ ಗೌರಿ- ಗಣೇಶ ಹಬ್ಬಕ್ಕೆ ಉಡುಗೊರೆ ನೀಡಿದೆ. ವಿದ್ಯುತ್ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳ ವಿದ್ಯುತ್ ಸಬ್ಸಿಡಿ ಮಿತಿ ರದ್ದುಪಡಿಸಿದೆ. ಇದರಿಂದ ಪ್ರತಿ ನೇಕಾರರಿಗೆ ವಾರ್ಷೀಕ ಕನಿಷ್ಟ ರೂ 40,000 ಉಳಿತಾಯವಾಗಲಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10.1 HPಯಿಂದ 20 HPವರೆಗಿನ ವಿದ್ಯುತ್ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳು ಬಳಕೆ ಮಾಡುವ ಪೂರ್ಣ ವಿದ್ಯುತ್ ಗೆ ಸಬ್ಸಿಡಿ ನೀಡಲಿದ್ದು, ನೇಕಾರರು ಪ್ರತಿ ಯೂನಿಟ್ ಗೆ ರೂ 1.25 ಮಾತ್ರ ಪಾವತಿ ಮಾಡಬೇಕು. ಸರ್ಕಾರದ ಈ ಕ್ರಮದಿಂದ 4000 ಘಟಕಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಇದುವರೆಗೆ ಮಾಸಿಕ 500 ಯೂನಿಟ್ ಗೆ ಮಾತ್ರ ಸಬ್ಸಿಡಿ ನೀಡಲಾಗುತ್ತಿತ್ತು. ಹೆಚ್ಚುವರಿ ಬಳಕೆಯ ವಿದ್ಯುತ್ಗೆ ನೇಕಾರರು ವಿದ್ಯುತ್ ಕಂಪನಿಗಳು ನಿಗದಿಪಡಿಸಿರುವ ದರದಲ್ಲಿ ವಿದ್ಯುತ್ ಶುಲ್ಕ ಪಾವತಿಸಬೇಕಿತ್ತು. ಸರ್ಕಾರ ಸಬ್ಸಿಡಿ ಮಿತಿ ರದ್ದುಪಡಿಸಿರುವುದರಿಂದ ಮಾಸಿಕ ಎಷ್ಟೇ ಯೂನಿಟ್ ವಿದ್ಯುತ್ ಬಳಕೆ ಮಾಡಿದರೂ ರೂ 1.25 ದರ ವಿಧಿಸಲಾಗುವುದು ಎಂದು ವಿವರಿಸಿದರು.
ನೇಕಾರರು 500 ಯೂನಿಟ್ ಮಿತಿ ರದ್ದುಪಡಿಸಿ ಪೂರ್ಣ ಪ್ರಮಾಣದಲ್ಲಿ ಸಬ್ಸಿಡಿ ದರದಲ್ಲಿವಿದ್ಯುತ್ ಪೂರೈಕೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಸರ್ಕಾರ ನೇಕಾರರ ಬೇಡಿಕೆಗೆ ಸ್ಪಂದಿಸಿ 500 ಯೂನಿಟ್ ಮಿತಿ ರದ್ದುಪಡಿಸಿದೆ . ಈ ಕ್ರಮದಿಂದ ಸರ್ಕಾರಕ್ಕೆ ವಾರ್ಷಿಕ 17 ಕೋಟಿ ರೂ. ಹೊರೆಯಾಗಲಿದೆ ಎಂದು ತಿಳಿಸಿದರು.