ಬೆಂಗಳೂರು: ಅದು ತಮಿಳುನಾಡಿನ ಕಿಲಾಡಿ ಗ್ಯಾಂಗ್. ಜನರಿಗೆ ಮಂಕುಬೂದಿ ಎರಚೋದೆ ಅವರ ಕಾಯಕ. ಅಸಲಿ ನೋಟು ಕೊಟ್ಟರೇ ಅದಕ್ಕಿಂತ ಹೆಚ್ಚಿನ ನಕಲಿ ನೋಟುನೀಡಿ ಮಾರಿಸುವದು ಕರಗತವಾಗಿತ್ತು. ರಾಜ್ಯ ಬಿಟ್ಟು ರಾಜ್ಯಕ್ಕೆ ಬಂದಿದ್ದ ಆ ಗ್ಯಾಂಗ್ ಬೆಂಗಳೂರಿನಲ್ಲಿ ಮೊದಲ ವಂಚನೆ ಪ್ರಯತ್ನದಲ್ಲೇ ಖಾಕಿ ಬಲೆಗೆ ಬಿದ್ದಿದೆ.
ಬಂಧಿತ ಶೇಕ್ ಮೊಹಮ್ಮದ್, ಮಿರಾನ್ ಮೊಹಿದ್ದೀನ್, ರಾಜೇಶ್ವರನ್ ತಮಿಳುನಾಡಿನ ತಿರುನೆಲ್ವೇಲಿ ಮೂಲದವರು. ಇಷ್ಟು ದಿನ ತಮಿಳುನಾಡು, ಆಂಧ್ರ ಭಾಗದಲ್ಲಿ ಜನರಿಗೆ ಮಂಕುಬೂದಿ ಎರಚಿ ವಂಚನೆ ಮಾಡುತ್ತಿದ್ದ ಈ ಗ್ಯಾಂಗ್ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಎಂಟ್ರಿ ಆಗಿದ್ದರು. ಒರಿಜಿನಿಲ್ ನೋಟಿಗೆ ಖೋಟಾ ನೋಟು ಕೊಡುವುದಾಗಿ ಆಫರ್ ನೀಡಿ ಕೊನೆಗೆ ಖೋಟಾ ನೋಟನ್ನೂ ಕೊಡದೆ ಯಾಮಾರಿಸುತ್ತಿದ್ದರು. ಇಂತ ಗ್ಯಾಂಗ್ ಬೆಂಗಳೂರಿಗರಿಗೆ ವಂಚನೆ ಮಾಡುವ ಮೊದಲೇ ಜಯನಗರ ಪೊಲೀಸರ ಖೆಡ್ಡಕ್ಕೆ ಬಿದ್ದಿದ್ದಾರೆ.
ಇತ್ತೀಚೆಗೆ ಜಯನಗರದ ಠಾಣಾ ವ್ಯಾಪ್ತಿಯಲ್ಲಿ ಕೆಲ ವ್ಯಕ್ತಿಗಳು 10 ಲಕ್ಷ ರೂ ಒರಿಜಿನಲ್ ನೋಟ್ ಕೊಟ್ಟರೆ 30 ಲಕ್ಷ ರೂ. ಕೋಟಾ ನೋಟಿನ ಆಫರ್ ಕೊಟ್ಟು ಗಾಳ ಹಾಕುತ್ತಿರುವ ಮಾಹಿತಿ ಜಯನಗರ ಪೊಲೀಸರಿಗೆ ಸಿಕ್ಕಿತ್ತು. ತಕ್ಷಣವೇ ಕಾರಿನಲ್ಲಿದ್ದ ಮೂವರು ಆಸಾಮಿಗಳ ಸುತ್ತವರಿದ ಖಾಕಿ ತಂಡ ವಶಕ್ಕೆ ಪಡೆದರು. ಬಳಿಕ ಕಾರಿನಲ್ಲಿದ್ದ ಸೂಟ್ ಕೇಸ್ ಪರಿಶೀಲನೆ ವೇಳೆ ಕಂತೆಕಂತೆ ಹಣವಿತ್ತು. ಆದರೆ ಹಣದ ಬಂಡಲ್ ಮೇಲೆ ಮತ್ತು ಕೆಳಗಡೆ ಮಾತ್ರ ಒರಿಜಿನಲ್ ಹಣ ಹಾಕಿ ಒಳಗಡೆ ಬಿಳಿ ಹಾಳೆ ಜೋಡಿಸಲಾಗಿತ್ತು. ಖೋಟಾ ನೋಟು ಕೂಡ ಇರಲಿಲ್ಲ. ಸದ್ಯ ಮೂವರನ್ನ ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಗಲಾಸರ್ ಹೇಳಿದ್ದಾರೆ.
ಇನ್ನು ಈ ಗ್ಯಾಂಗ್ ತಮಿಳುನಾಡು, ಆಂಧ್ರದಲ್ಲಿ ಹಲವರಿಗೆ ಇದೇ ರೀತಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳಿಂದ 15 ಸಾವಿರ ರೂ ಅಸಲಿ ನೋಟ್ ಸಮೇತ ಕಾರು, ಸೂಟ್ ಕೇಸ್ ವಶಕ್ಕೆ ಪಡೆಯಲಾಗಿದ್ದು, ಈ ಗ್ಯಾಂಗ್ನ ಇನ್ನಷ್ಟು ಸದಸ್ಯರಿಗಾಗಿ ಹುಡುಕಾಟ ನಡೆಸಿದ್ದಾರೆ.
For More Updates Join our WhatsApp Group :
