ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ: ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದು ಸೂಕ್ತವಲ್ಲವೆಂದು ಈಗಾಗಲೇ ಸರ್ಕಾರ ಸ್ಪಷ್ಟಪಡಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸದಾಶಿವನಗರದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಚುನಾವಣೆಗೂ ಮೊದಲು ಈ ರೀತಿಯ ಬಹಳಷ್ಟು ಪ್ರಶ್ನೆಗಳು ಕೇಳಿ ಬಂದವು. ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ನಿಲ್ಲಿಸುತ್ತದೆ ಎಂದು ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸಿದರು. ಇದಕ್ಕೆ ಚುನಾವಣೆ ಸಂದರ್ಭದಲ್ಲಿಯೇ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರು ಸೇರಿದಂತೆ ನಾವೆಲ್ಲ ಸ್ಪಷ್ಟಪಡಿಸಿದ್ದೇವೆ ಎಂದರು.

ನಾವು ಗ್ಯಾರಂಟಿ ಯೋಜನೆಗಳನ್ನು ಕೊಡುವುದಕ್ಕೂ ಮೊದಲು ಬಹಳಷ್ಟು ಚರ್ಚೆ ಮಾಡಿದ್ದೇವೆ. ನಮ್ಮ ಉದ್ದೇಶ ಇರುವುದು ಬಡತನ ನಿರ್ಮೂಲನೆ. ಈ ಉದ್ದೇಶದಲ್ಲಿ ಹೊಂದಾಣಿಕೆಯಾಗಲ್ಲ. ಹಳ್ಳಿಗಳಲ್ಲಿ ಕೃಷಿ ಕೂಲಿ ಕಾರ್ಮಿಕರು ಬಹಳ ತೊಂದರೆಯಲ್ಲಿದ್ದಾರೆ. ನೋಟು ಬದಲಾವಣೆ, ಜಿಎಸ್‌ಟಿ ಜಾರಿಯಾದ ನಂತರ ಬಡತನದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರು‌.

ಬಡ ಜನರಿಗೆ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಪ್ರಣಾಳಿಕೆಯ ಅಧ್ಯಕ್ಷನಾಗಿ ಚರ್ಚೆ ಮಾಡಿ, ಗ್ಯಾರಂಟಿ ಯೋಜನೆಗಳ ತೀರ್ಮಾನ ತೆಗೆದುಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದು ಸೂಕ್ತವಲ್ಲ ಎಂದು ತೀರ್ಮಾನ ಮಾಡಿಕೊಂಡಿದ್ದೇವೆ. ಯಾರು ಏನೇ ಹೇಳಿದರೂ ಸಹ ಈಗಾಗಲೇ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಜಾರಿಯಿಂದ ಒಂದಷ್ಟು ಹಣಕಾಸಿನ ತೊಂದರೆಯಾಗುತ್ತದೆ ಎಂಬುದು ಎಲ್ಲರಿಗೆ ಗೊತ್ತಿರುವ ವಿಚಾರ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚಾಗುವಾಗ ಮರು ಹೊಂದಿಕೆ ಮಾಡಬೇಕಾಗುತ್ತದೆ. ಇದನ್ನು ನಾವು ಮಾಡುತ್ತೇವೆ. ಅದು ನಮಗೆ ಗೊತ್ತಿದೆ. ಜನ ಹಸಿವಿನಿಂದ ಖಾಲಿ ಹೊಟ್ಟೆಯಲ್ಲಿದ್ದು, ಯಾವ ಬೇರೆ ಯೋಜನೆಗಳನ್ನು ಜಾರಿಗೆ ತಂದರೂ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದರು.

ಖಾಲಿಯಾಗಿರುವ ಸಚಿವ ಸ್ಥಾನದ ಭರ್ತಿಯ ಕುರಿತು ಪ್ರತಿಕ್ರಿಯಿಸಿ, ಖಾಲಿ ಇರುವ ಸಚಿವ ಸ್ಥಾನ ಭರ್ತಿ ಮಾಡುವ ವಿಚಾರ ಮುಖ್ಯಮಂತ್ರಿಯವರಿಗೆ ಬಿಟ್ಟಿರುವುದು. ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡಿ, ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದರ ಬಗ್ಗೆ ನಾನು ಉತ್ತರಿಸಲು ಆಗುವುದಿಲ್ಲ ಎಂದರು.

Leave a Reply

Your email address will not be published. Required fields are marked *