ನವದೆಹಲಿ: ಸಿಖ್ ಧರ್ಮದ ಸ್ಥಾಪಕ ಗುರು ನಾನಕ್ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭಾಶಯ ಕೋರಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ‘ಗುರುನಾನಕ್ ಜಯಂತಿಯ ಶುಭಾಶಯಗಳು.
ಅವರ ಬೋಧನೆಗಳು ಸಹಾನುಭೂತಿ, ದಯೆ ಮತ್ತು ನಮ್ರತೆಯ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲು ನಮಗೆ ಸ್ಫೂರ್ತಿ ನೀಡಲಿ’ ಎಂದು ಹೇಳಿದ್ದಾರೆ.
‘ಇಂದು ಗುರುನಾನಕ್ ಅವರ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ದೇಶ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲಾ ಭಾರತೀಯರಿಗೆ, ವಿಶೇಷವಾಗಿ ಸಿಖ್ ಸಮುದಾಯದ ಸಹೋದರ ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಗುರುನಾನಕ್ ಸತ್ಯ, ಸಂತೃಪ್ತಿ, ದಯೆ, ವಿನಯ ಮತ್ತು ಪ್ರೀತಿಯಿಂದ ಸಮಾಜವನ್ನು ಕಟ್ಟಲು ಬಯಸಿದ್ದರು. ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸಾಮರಸ್ಯದಿಂದ ಕೂಡಿದ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.