ಅಮೆರಿಕನ್ ಪ್ರವಾಸಿಗನ ಹ* ಪ್ರಕರಣಕ್ಕೆ ಗಂಗಾವತಿ ಕೋರ್ಟ್ ಐತಿಹಾಸಿಕ ತೀರ್ಪು.
ಕೊಪ್ಪಳ: ಹಂಪಿ ಬಳಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ವಿದೇಶಿ ಪ್ರವಾಸಿಗನ ಕೊಲೆ ಪ್ರಕರಣದ ಅಪರಾಧಿಗಳಿಗೆ ಕೋರ್ಟ್ ಮರಣದಂಡನೆ ವಿಧಿಸಿದೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಇಸ್ರೇಲ್ ಮಹಿಳೆ ಮೇಲಿನ ಅತ್ಯಾಚಾರ ಮತ್ತು ಅಮೆರಿಕದ ಪ್ರವಾಸಿಗನ ಕೊಲೆ ಪ್ರಕರಣ ಸಂಬಂಧ ಗಂಗಾವತಿ ನ್ಯಾಯಾಲಯವು ಇದೇ ಫೆಬ್ರವರಿ 6ರಂದು ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಇಂದು (ಫೆಬ್ರವರಿ 16)ಗಂಗಾವತಿ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷಿ ವಿಧಿಸಿ ಆದೇಶ ಹೊರಡಿಸಿದ್ದಾರೆ. ಮಲ್ಲೇಶ್ ಅಲಿಯಾಸ್ ಹಂದಿಮಲ್ಲ, ಸಾಯಿ ಮತ್ತು ಶರಣಪ್ಪ ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಈ ಘಟನೆ ನಡೆದ ಕೇವಲ 9 ತಿಂಗಳಲ್ಲೇ ಗಂಗಾವತಿ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಸಾಣಾಪೂರ ಬಳಿ ನಡೆದಿದ್ದ ಘೋರ ಕೃತ್ಯ
2025ರ ಮಾರ್ಚ್ ತಿಂಗಳಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಂಪಿಯ ಸಾಣಾಪೂರ ಬಳಿ ಈ ಪೈಶಾಚಿಕ ಕೃತ್ಯ ನಡೆದಿತ್ತು. ಇಸ್ರೇಲ್ ಮೂಲದ ಮಹಿಳೆಯ ಮೇಲೆ ಅಮಾನವೀಯವಾಗಿ ಅತ್ಯಾಚಾರವೆಸಗಿದ್ದರು. ಈ ಘಟನೆಯಲ್ಲಿ ವಿದೇಶಿ ಯುವಕನ ಕೊಲೆಯಾಗಿತ್ತು. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಕರಿನೆರಳು ಬಿದ್ದಿತ್ತು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಲ್ಲೇಶ್ ಅಲಿಯಾಸ್ ಹಂದಿಮಲ್ಲ, ಸಾಯಿ ಹಾಗೂ ಶರಣಪ್ಪ ಮೂವರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಅತ್ಯಂತ ಚುರುಕಾಗಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮಲ್ಲೇಶ್ ಅಲಿಯಾಸ್ ಹಂದಿಮಲ್ಲ, ಸಾಯಿ ಮತ್ತು ಶರಣಪ್ಪ ಎಂಬ ಮೂವರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ಗಂಗಾವತಿಯ ಹೆಚ್ಚುವರಿ ಸತ್ರ ನ್ಯಾಯಾಲಯವು, ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಈ ಮೂವರೂ ದೋಷಿಗಳು ಎಂದು ಆದೇಶಿಸಿತ್ತು.
For More Updates Join our WhatsApp Group :




