ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಬಾಕ್ಸ್ ಆಫೀಸ್ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. ಚಿತ್ರ ನಾಲ್ಕು ದಿನಕ್ಕೆ ಗಳಿಕೆ ಮಾಡಿದ್ದು ಕೇವಲ 75 ಕೋಟಿ ರೂಪಾಯಿ. ಈ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಲು ಒದ್ದಾಡುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ 75 ಕೋಟಿ ರೂಪಾಯಿ ದೊಡ್ಡ ಮೊತ್ತವೇ. ಆದರೆ, ಪವನ್ ಕಲ್ಯಾಣ್ಗೆ ಇರುವ ಚಾರ್ಮ್ ಹಾಗೂ ಸಿನಿಮಾದ ಬಜೆಟ್ಗೆ ಹೋಲಿಕೆ ಮಾಡಿದರೆ ಈ ಗಳಿಕೆ ದೊಡ್ಡದಲ್ಲ.
ಪವನ್ ಕಲ್ಯಾಣ್ ಅವರು ‘ಹರಿ ಹರ ವೀರ ಮಲ್ಲು’ ಚಿತ್ರವನ್ನು ಐದು ವರ್ಷಗಳ ಹಿಂದೆಯೇ ಘೋಷಣೆ ಮಾಡಿದ್ದರು. ರಾಜಕೀಯದಲ್ಲಿ ಹಾಗೂ ಪಕ್ಷ ಬಲ ಪಡಿಸುವಲ್ಲಿ ಅವರು ಬ್ಯುಸಿ ಆಗಿದ್ದರಿಂದ ಅವರಿಗೆ ಸಿನಿಮಾಗೆ ಟೈಮ್ ನೀಡೋಕೆ ಸಾಧ್ಯವೇ ಆಗಿಲ್ಲ. ಹೀಗಾಗಿ, ಸಿನಿಮಾ ವಿಳಂಬ ಆಗಿದ್ದು ಮಾತ್ರವಲ್ಲ ಚಿತ್ರದ ನಿರ್ದೇಶಕರು ಕೂಡ ಬದಲಾದರು. ಜೊತೆಗೆ ಸಾಕಷ್ಟು ಗ್ಯಾಪ್ ತೆಗೆದುಕೊಂಡು ಶೂಟ್ ಮಾಡಿದ್ದರಿಂದ ಸಿನಿಮಾಗೆ ಕಂಟ್ಯೂನಿಟಿ ಇರಲೇ ಇಲ್ಲ.
‘ಹರಿ ಹರ ವೀರ ಮಲ್ಲು’ ಸಿನಿಮಾ ಓಪನಿಂಗ್ ದಿನ (ಪ್ರೀಮಿಯರ್ ಶೋ ಗಳಿಕೆಯೂ ಸೇರಿ) 47 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಶುಕ್ರವಾರ 8 ಕೋಟಿ ರೂಪಾಯಿ, ಶನಿವಾರ 9 ಕೋಟಿ ರೂಪಾಯಿ, ಭಾನುವಾರ ಕೇವಲ 11 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಲು ಸಾಕಷ್ಟು ಕಷ್ಟಪಡುತ್ತಿದೆ. ಅದಕ್ಕೆ ಇನ್ನೂ ಒಂದು ವಾರ ಬೇಕಾಗಬಹುದು.
ಪವನ್ ಕಲ್ಯಾಣ್ ಅವರ ಕಂಬ್ಯಾಕ್ ಸಿನಿಮಾ ಇದು. ಈ ಕಾರಣಕ್ಕೆ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು. ಇನ್ನು, ಚಿತ್ರದ ಬಜೆಟ್ 250 ಕೋಟಿ ರೂಪಾಯಿ. ಹೀಗಾಗಿ, ಸಿನಿಮಾ ಲಾಭ ಕಾಣಬೇಕು ಎಂದರೆ ಸಾಕಷ್ಟು ಹಣ ಗಳಿಕೆ ಮಾಡಬೇಕಿತ್ತು. ಆದರೆ, ಸಿನಿಮಾ ಅಂದುಕೊಂಡ ರೀತಿಯಲ್ಲಿ ಗಳಿಕೆ ಮಾಡುತ್ತಿಲ್ಲ.