ಇಂದು (ಸೆಪ್ಟೆಂಬರ್ 02) ನಟ ಕಿಚ್ಚ ಸುದೀಪ್ ಅವರು 51ನೇ ಹುಟ್ಟುಹಬ್ಬದ ಸಂಭ್ರದಲ್ಲಿದ್ದಾರೆ. ಇನ್ನು ಅವರು ತುಂಬಾ ಅಭಿಮಾನಿಗಳು ಸೇರುತ್ತಾರೆಂಬ ಕಾರಣಕ್ಕೆ ಜೆಪಿ ನಗರದ ತಮ್ಮ ನಿವಾಸದ ಬಳಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಬದಲಾಗಿ ಜಯನಗರದ ಎಂಇಎಸ್ ಮೈದಾನದಲ್ಲಿ ಕಾರ್ಯಕ್ರಮ ನಡೆಸಿ, ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ಅಭಿಮಾನಿಗಳ ಬಗ್ಗೆ ಮಾತನಾಡಿರುವ ಕಿಚ್ಚ ಸುದೀಪ್ ಅವರು, ಯಾವತ್ತೂ ನಾವು ಸಂಪಾದನೆ ಮಾಡಿರುವಂತಹ ನನ್ನ ಹೆಸರಿಗೆ ಕಳಂಕ ತರುವಂತಹ ಯಾವ ಕೆಲಸವನ್ನೂ ನನ್ನ ಅಭಿಮಾನಿಗಳು ಮಾಡಿಲ್ಲ, ಮುಂದುಯೋ ಮಾಡೋದಿಲ್ಲ. ಇದು ಸಮಾಜಕ್ಕೆ ತುಂಬಾನೇ ಮುಖ್ಯ ಆಗುತ್ತದೆ ಎಂದು ಹೇಳಿದರು.
ಸಿನಿಮಾ ಎಲ್ಲಾರೂ ಮಾಡುತ್ತೇವೆ. ದೊಡ್ಡ ದೊಡ್ಡ ಕಲಾವಿದರೂ ಇದ್ದಾರೆ, ಹೊಸಬರು ಇದ್ದಾರೆ. ಅವರು ಒಳ್ಳೊಳ್ಳೆ ಸಿನಿಮಾಗಳನ್ನು ಕೊಡುತ್ತಿದ್ದು, ಯಶಸ್ಸು ಕಾಣುತ್ತಾ. ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾರೆ ಅಂತಲೂ ಇದೇ ವೇಳೆ ಹೇಳಿದ್ದಾರೆ.
ಇನ್ನು ವ್ಯಕ್ತಿತ್ವದಲ್ಲಿ ದೊಡ್ಡವರಾಗಬೇಕು ಅಂದರೆ ಬರೀ ಸಿನಿಮಾ ಮಾತ್ರ ಸಾಕಾಗುವುದಿಲ್ಲ. ನನ್ನ ಕುಟುಂಬ, ಸ್ನೇಹಿತರು, ಅಭಿಮಾನಿಗಳು ನನ್ನೊಂದಿಗೆ ಚೆನ್ನಾಗಿದ್ದಾರೆ. ಅಲ್ಲದೆ, ನಾನು ತಪ್ಪಿ ನಡೆಯುವಾಗ ಮಾಧ್ಯಮ ಮಿತ್ರರು ಹಲವು ಬಾರಿ ತಿದ್ದಿದ್ದಾರೆ. ಇವರೆಲ್ಲ ನನ್ನ ಜೀವನದಲ್ಲಿ ಚೆನ್ನಾಗಿದ್ದಾರೆ. ಆದ್ದರಿಂದ ಇವತ್ತು ನಾನು ಕೂಡ ಚೆನ್ನಾಗಿದ್ದೀನಿ ಎಂದು ನಟ ಕಿಚ್ಚ ಸುದೀಪ್ ಹೇಳಿದರು.