ಶೆಫಾಲಿ ಜರಿವಾಲ ಅವರು ನಿಧನ ಹೊಂದಿದ್ದಾರೆ. ಕೇವಲ 42ನೇ ವಯಸ್ಸಿಗೆ ಅವರು ಕೊನೆಯುಸಿರು ಎಳೆದಿದ್ದಾರೆ. ಅವರ ಸಾವಿಗೆ ಈವರೆಗೆ ಅಸಲಿ ಕಾರಣ ತಿಳಿದಿಲ್ಲ. ಕೆಲವರು ಅವರಿಗೆ ಹೃದಯಾಘಾತ ಆಗಿದೆ ಎಂದರು. ಇನ್ನೂ ಕೆಲವರು ವಯಸ್ಸಾಗದಂತೆ ನೋಡಿಕೊಳ್ಳಲು ಅವರು ಮಾತ್ರೆ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಲಾಯಿತು. ಈಗ ಶೆಫಾಲಿ ಜರಿವಾಲ ಸಾವಿನ ಬಗ್ಗೆ ವೈದ್ಯರು ಹೊಸ ಮಾಹಿತಿ ನೀಡಿದ್ದಾರೆ. ಆದರೆ, ಈ ಕಾರಣವನ್ನು ಯಾರೂ ಊಹಿಸಿರಲಿಲ್ಲ.

ಶುಕ್ರವಾರ ರಾತ್ರಿ ಶೆಫಾಲಿ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದರು. ಈ ವೇಳೆ ಜೊತೆಯಲ್ಲೇ ಇದ್ದ ಅವರ ಪತಿ ಪರಾಗ್ ತ್ಯಾಗಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ, ಆಸ್ಪತ್ರೆಗೆ ಬರೋ ಮೊದಲೆಯೇ ಅವರು ನಿಧನ ಹೊಂದಿದ್ದಾಗಿ ವೈದ್ಯರು ಘೋಷಿಸಿದರು. ಆ ಬಳಿಕ ಅವರ ಶವವನ್ನು ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಏಕಾಏಕಿ ಬಿಪಿ ಲೋ ಆಗಿದ್ದರಿಂದ ಶೆಫಾಲಿ ನಿಧನ ಹೊಂದಿದರು ಎಂದು ವೈದ್ಯರು ಶಂಕಿಸಿದ್ದಾರೆ. ಭಾನುವಾರ ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದರು. ಇದಕ್ಕಾಗಿ ನಟಿ ಉಪವಾಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಸಿಕ್ಕ ವಸ್ತುಗಳೇನು?
ಪೊಲೀಸರು ನಟಿಯ ಪತಿ ಮತ್ತು ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಅವರ ಮನೆ ಪರಿಶೀಲಿಸುವಾಗ ವಯಸ್ಸಾಗದಂತೆ ತಡೆಯಲು ಬಳಕೆ ಮಾಡುವ ಮಾತ್ರೆ, ಚರ್ಮಕ್ಕೆ ಹೊಳಪು ಕೊಡೋ ಮಾತ್ರೆಗಳು, ವಿಟಮಿನ್ ಮಾತ್ರೆಗಳನ್ನು ಸಿಕ್ಕಿವೆ. ಶೆಫಾಲಿ ಅವರು ವೈದ್ಯರ ಸಂಪರ್ಕಿಸದೆ ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಕುಟುಂಬ ತಿಳಿಸಿದೆ. ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದ ಕಾರಣಕ್ಕೆ ಅವರಿಗೆ ಈವರೆಗೆ ಯಾವುದೇ ತೊಂದರೆ ಆಗಿರಲಿಲ್ಲವಂತೆ.