ಕರ್ನಾಟಕದಲ್ಲಿ ಉಷ್ಣ ಅಲೆ – 6 ಜಿಲ್ಲೆಗಳಿಗೆ ರೆಡ್ ಅಲರ್ಟ್

ಬೆಂಗಳೂರು : ಕರ್ನಾಟಕದಲ್ಲಿ ಬೇಸಿಗೆಯ ಬಿಸಿಲು ಹೆಚ್ಚಾಗುತ್ತಿದ್ದಂತೆ ಭಾರತೀಯ ಹವಾಮಾನ ಇಲಾಖೆ ಕರ್ನಾಟಕದ 12 ಜಿಲ್ಲೆಗಳಿಗೆ ಉಷ್ಣ ಹವೆಯ ಮುನ್ನೆಚ್ಚರಿಕೆ ನೀಡಿದೆ.

ಮೇ 1ರಿಂದ 5ರವರೆಗೆ ಮಂಡ್ಯ, ಮೈಸೂರು, ತುಮಕೂರು, ಬಳ್ಳಾರಿ, ವಿಜಯಪುರ, ಕಲಬುರಗಿ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಬರಲಿವೆ ಎಂದು ಇಲಾಖೆ ತಿಳಿಸಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಅಲ್ಲಿನ ಜನರಿಗೆ ಕೆಲವು ಮಾರ್ಗಸೂಚಿಗಳನ್ನು ನೀಡಿದ್ದು, ಆ ಮಾರ್ಗಸೂಚಿಗಳನ್ನು ಪಾಲಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದೆ

ರೆಡ್ ಅಲರ್ಟ್ : ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಶಾಖದ ಅಲೆಗಳ ತೀವ್ರತೆ ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ. ಈ ಜಿಲ್ಲೆಗಳಲ್ಲಿ ವಾಸಿಸುವ ಜನರು ಹಾಗೂ ಈ ಜಿಲ್ಲೆಗಳ ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರು ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸೂಚಿಸಲಾಗಿದೆ.

ಈ ಜಿಲ್ಲೆಗಳಲ್ಲಿನ ಎಲ್ಲಾ ವಯಸ್ಸಿನ ವ್ಯಕ್ತಿಗಳಿಗೆ ಶಾಖದ ಕಾಯಿಲೆಗಳು, ಹೀಟ್ ಸ್ಟ್ರೋಕ್ಸ್ ಗಳು ಉಂಟಾಗುವ ಸಾಧ್ಯತೆಗಳಿವೆ. ದೈಹಿಕವಾಗಿ ದುರ್ಬಲರಾಗಿರುವ ವ್ಯಕ್ತಿಗಳಿಗೆ ತೀವ್ರ ಕಾಳಜಿಯ ಅಗತ್ಯವಿದೆ ಎಂದು ಹೇಳಲಾಗಿದೆ

ಆರೇಂಜ್ ಅಲರ್ಟ್ : ಈ ವ್ಯಾಪ್ತಿಗೆ ಕಲಬುರಗಿ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಹಾಗೂ ಯಾದಗಿರಿ ಜಿಲ್ಲೆಗಳನ್ನು ಸೇರಿಸಲಾಗಿದೆ. ಈ ಜಿಲ್ಲೆಗಳಲ್ಲಿ ಮೇ 1 ರಿಂದ 5ರವರೆಗೆ ಅಧಿಕ ತಾಪಮಾನ ಇರಲಿದ್ದು, ದೀರ್ಘಾವಧಿಯವರೆಗೆ ಸೂರ್ಯನಿಗೆ ಒಡ್ಡಿಕೊಳ್ಳುವ ಅಥವಾ ಭಾರೀ ಕೆಲಸ ಮಾಡುವ ಜನರಲ್ಲಿ ಶಾಖದ ಕಾಯಿಲೆಯ ಲಕ್ಷಣಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಹಳದಿ ಎಚ್ಚರಿಕೆ ನೀಡಲಾಗಿರುವ ಜಿಲ್ಲೆಗಳು ಯಾವುವು?

ಈ ವಿಭಾಗದಲ್ಲಿ ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳನ್ನು ಸೇರಿಸಲಾಗಿದೆ. ಸಾಧಾರಣ ತಾಪಮಾನ ಮತ್ತು ಶಾಖವು ಸಾಮಾನ್ಯ ಜನರಿಗೆ ತಟ್ಟುತ್ತದೆ ಎಂದು ಹೇಳಲಾಗಿದೆ. ಈ ಭಾಗದಲ್ಲಿ ಶಿಶುಗಳು, ವೃದ್ಧರು, ದೀರ್ಘಕಾಲದ ಕಾಯಿಲೆಯಿರುವ ಜನರಿಗೆ ಹೆಚ್ಚಿನ ಕಾಳಜಿ ನೀಡುವ ಅವಶ್ಯಕತೆಯಿದೆ ಎಂದು ಹೇಳಲಾಗಿದೆ.

  • ವಿಶೇಷವಾಗಿ ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಹೊರಗೆ ಹೋಗುವುದನ್ನು ತಪ್ಪಿಸಿ.
  • ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಿರಿ.
  • ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಿ. ಬಿಸಿಲಿನಲ್ಲಿ ಹೋಗುವಾಗ ಕೂಲಿಂಗ್ ಗ್ಲಾಸ್, ಛತ್ರಿ- ಟೋಪಿ, ಶೂಗಳು, ಚಪ್ಪಲಿಗಳನ್ನು ಬಳಸಿ.
  • ತಾಪಮಾನ ಹೆಚ್ಚಾದಾಗ ಹೊರಗಡೆ ಬಿಸಿಲಿನಲ್ಲಿ ನಿಂತು ಹೆಚ್ಚಿನ ಶ್ರಮದಾಯಕ ಕೆಲಸಗಳನ್ನು ಮಾಡಬೇಡಿ.
  • ದೇಹವನ್ನು ನಿರ್ಜಲೀಗೊಳಿಸುವ ಪಾನೀಯಗಳಾದ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ತಪ್ಪಿಸಿ.
  • ಹೆಚ್ಚಿನ ಪ್ರೋಟೀನ್ ಆಹಾರಗಳನ್ನು ಸೇವಿಸಿ ಮತ್ತು ಹಳೆಯ ಆಹಾರಗಳನ್ನು ಸೇವಿಸಬೇಡಿ.
  • ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕು ಪ್ರಾಣಿಗಳನ್ನು ಬಿಡಬೇಡಿ.
  • ಬಿಸಿಲಿನ ಝಳದಿಂದ ನಿಮಗೆ ಮೂರ್ಛೆ ಅಥವಾ ಅನಾರೋಗ್ಯ ಸಮಸ್ಯೆ ಎದುರಾದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.
  • ಓಆರ್ ಎಸ್, ಮನೆಯಲ್ಲಿ ತಯಾರಿಸಿದ ತಂಪು ಪಾನೀಯಗಳಾದ ಲಸ್ಸಿ, ಮಜ್ಜಿಗೆ, ತೋರಣಿ (ಅಕ್ಕಿ ನೀರು), ನಿಂಬೆ ಹಣ್ಣಿನ ಜ್ಯೂಸ್ ಇತ್ಯಾದಿಗಳನ್ನು ಸೇವಿಸಿ.
  • ನಿಮ್ಮ ಮನೆಯನ್ನು ತಂಪಾಗಿರಿಸಲು ಪರದೆಗಳು, ಶಟರ್ ಗಳು, ಸನ್ ಶೇಡ್ ಗಳನ್ನು ಬಳಸಿ. ರಾತ್ರಿಯಲ್ಲಿ ಕಿಟಕಿಗಳನ್ನು ತೆರೆಯಿರಿ.
  • ಫ್ಯಾನ್, ಒದ್ದೆ ಬಟ್ಟೆ ಬಳಸಿ ಹಾಗೂ ತಣ್ಣೀರಿನಲ್ಲಿ ಸ್ನಾನ ಮಾಡಿ.

Click here to join Pragathi webportal Whatsapp group : https://chat.whatsapp.com/FgmwH9BYVs9IxV4fA1um2M

Leave a Reply

Your email address will not be published. Required fields are marked *