ಈಗಾಗಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಆರ್ಭಟದಿಂದ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಇದೀಗ ಚಳಿಗಾಲದ ನಡುವೆಯೂ ಹವೆಡೆ ಮಳೆ ಮುಂದುವರೆದಿದೆ. ಬಂಗಾಳಕೊಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ ಮುಂದಿನ 4 ದಿನಗಳ ಕಾಲ ಈ ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಫೆಂಗಲ್ ಚಂಡಮಾರುತ ಹಿನ್ನೆಲೆ ದೇಶದ ದೇಶದ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆಯಲಿದ್ದಾನೆ. ಇಂದು (ನವೆಂಬರ್ 28) ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿನ ಕಾರೈಕಲ್, ಪುದುಚೇರಿ, ಕರಾವಳಿ ಆಂಧ್ರಪ್ರದೇಶ, ಕರ್ನಾಟಕದ ಹಲವೆಡೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ರಾಯಲಸೀಮಾದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಅಷ್ಟೇ ಅಲ್ಲದೆ, ನವೆಂಬರ್ 28ರಿಂದ 30ರ ವರೆಗೆ ಕರಾವಳಿ ಆಂಧ್ರ ಪ್ರದೇಶ, ಯಾನಂ ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಅಂತಲೂ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಇನ್ನು ನವೆಂಬರ್ 29ರ ವರೆಗೆ ಹಿಮಾಚಲ ಪ್ರದೇಶದ ಪ್ರತ್ಯೇಕ ಪ್ರದೇಶಗಳಲ್ಲಿ ತಡರಾತ್ರಿ ಮತ್ತು ಮುಂಜಾನೆ ವೇಳೆ ದಟ್ಟವಾದ ಮಂಜಿನ ವಾತಾವರಣ ಇರಲಿದೆ. ಡಿಸೆಂಬರ್ 1ರ ವರೆಗೆ ಚಂಡೀಗಢ, ಹರಿಯಾಣ ಮತ್ತು ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಇದೇ ರೀತಿಯ ಹವಾಮಾನ ಇರಲಿದೆ ಎಂದು ತಿಳಿಸಿದೆ. ಈಗಾಗಲೇ ಶ್ರೀನಗರ ಮತ್ತು ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಭಾರೀ ತಂಡಿಯ ವಾತಾವರಣದಿಂದ ಇಲ್ಲಿನ ಜನರು ಮನೆಯಿಂದ ಹೊರಗಡೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕಿ ಇಲ್ಲಿನ ಪ್ರದೇಶಗಳಲ್ಲಿ ತಾಪಮಾನ ಪ್ರಮಾಣ ಕುಸಿಯುತ್ತಲೇ ಇದೆ. ಇನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದಟ್ಟ ಮಂಜಿನ ನಡುವೆಯೂ ಗಾಳಿಯ ಗುಣಪಟ್ಟ ಕಳಪೆಯಾಗುತ್ತಲೇ ಇದೆ. ಈ ವಾತಾವರಣ ಇಲ್ಲಿನ ವಾಹನ ಸವಾರರು, ಜನರಿಗೆ ಉಸಿರುಗಟ್ಟಿಸುವಂತಿದೆ.
ಎಲ್ಲೆಲ್ಲಿ ಎಷ್ಟು ದಿನ ಮಳೆ?: ಇಂದು (ನವೆಂಬರ್ 28) ಕರಾವಳಿ ಆಂಧ್ರಪ್ರದೇಶ, ಪುದುಚೇರಿ, ಯಾನಂ, ರಾಯಲಸೀಮಾ ಮತ್ತು ತಮಿಳುನಾಡಿನಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 28ರಿಂದ 30ರ ವರೆಗೆ ಯಾನಂ, ರಾಯಲಸೀಮಾ ಮತ್ತು ಕರಾವಳಿ ಆಂಧ್ರ ಪ್ರದೇಶ, ಕೇರಳ. ಡಿಸೆಂಬರ್ 1 ಮತ್ತು ಡಿಸೆಂಬರ್ 2ರಂದು ಪುದುಚೇರಿ ಮತ್ತು ಕರಾವಳಿ ಆಂಧ್ರಪ್ರದೇಶ, ಕರ್ನಾಟಕದ ಹಲವೆಡೆ ಪ್ರತ್ಯೇಕವಾಗಿ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಎರಡು ದಿನಗಳವರೆಗೆ ಪೂರ್ವ ಭಾರತದಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಹಲವೆಡೆ ಮುಂದಿನ 2-3 ದಿನಗಳಲ್ಲಿ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್ನಷ್ಟು ಕುಸಿತವಾಗುವ ಸಾಧ್ಯತೆಯಿದೆ. ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ತಾಪಮಾನದಲ್ಲಿ ಮುಂದಿನ ಐದು ದಿನಗಳವರೆಗೆ ಸಾಮಾನ್ಯ ದಿನಗಳಂತೆ ಸ್ಥಿರವಾಗಿರುತ್ತದೆ ಎಂದು ತಿಳಿಸಿದೆ.