ಯಾದಗಿರಿ: ಮಕ್ಕಳನ್ನು ಅಂಗನವಾಡಿಯಲ್ಲಿ ಲಾಕ್ ಮಾಡಿ ಸಹಾಯಕಿ ಜಮೀನು ಕೆಲಸಕ್ಕೆ ಹೋದ ಘಟನೆ ಗುರುಮಠಕಲ್ ತಾಲೂಕಿನ ಬುದೂರ್ ಗ್ರಾಮದಲ್ಲಿ ನಡೆದಿದೆ. ಮಾಸಿಕ ಸಭೆ ನಿಮಿತ್ತ ಅಂಗನವಾಡಿ ಮುಖ್ಯ ಸಹಾಯಕಿ ಬೇರೆ ಗ್ರಾಮಕ್ಕೆ ಹೋಗಿದ್ದರು. ಅಂಗನವಾಡಿ ಮುಖ್ಯ ಸಹಾಯಕಿ ಅತ್ತ ಹೋಗುತ್ತಿದ್ದಂತೆ ಇತ್ತ, ಸಹಾಯಕಿ ಸಾವಿತ್ರಮ್ಮ ಮಕ್ಕಳನ್ನು ಅಂಗನವಾಡಿಯಲ್ಲಿ ಲಾಕ್ ಮಾಡಿ ಜಮೀನು ಕೆಲಸಕ್ಕೆ ಹೋಗಿದ್ದಾಳೆ. ಆಗ, ಮಕ್ಕಳು ಅಳಲು ಆರಂಭಿಸಿದವು.
ಮಕ್ಕಳು ಅಳುತ್ತಿರುವ ಶಬ್ದ ಕೇಳಿ ಸ್ಥಳೀಯರು ಅಂಗನವಾಡಿ ಮುಖ್ಯ ಸಹಾಯಕಿಗೆ ವಿಷಯ ತಿಳಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಕೂಡಲೆ ಅಂಗನವಾಡಿಗೆ ಆಗಮಿಸಿದ ಮುಖ್ಯ ಸಹಾಯಕಿ ಬಾಗಿಲು ತೆರೆದಿದ್ದಾರೆ. ಮಕ್ಕಳನ್ನು ಲಾಕ್ ಮಾಡಿದ ಸಹಾಯಕಿ ಸಾವಿತ್ರಮ್ಮ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.