ಜಮೀರ್ ಆಪ್ತನಿಗೆ ಹೈಕೋರ್ಟ್ ರಿಲೀಫ್.

ಜಮೀರ್ ಆಪ್ತನಿಗೆ ಹೈಕೋರ್ಟ್ ರಿಲೀಫ್.

ಲೋಕಾಯುಕ್ತ ಡಿಎ ಕೇಸಿಗೆ ತನಿಖೆ ತಾತ್ಕಾಲಿಕ ತಡೆ.

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಜ್ ಖಾನ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್​​ಗೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ತಡೆ ನೀಡಿ ಆದೇಶಿಸಿದೆ. ಅರ್ಜಿದಾರರ ಪರ ವಾದಿಸಿದ್ದ ಹಿರಿಯ ವಕೀಲ ಸಿ.ಹೆಚ್.ಜಾಧವ್, ಆಸ್ತಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಘೋಷಣೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಆದರೆ ಲೋಕಾಯುಕ್ತ ಪರ ವಕೀಲ ಬಿ.ಬಿ.ಪಾಟೀಲ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಪರಿಶೀಲನೆಯಲ್ಲಿ ಶೇ.131ರಷ್ಟು ಆದಾಯ ಮೀರಿದ ಆಸ್ತಿ ಗಳಿಕೆ ಕಂಡುಬಂದಿದೆ. ಸರ್ದಾರ್ ಸರ್ಫರಾಜ್ ಖಾನ್, 2 ಕೋಟಿ 80 ಲಕ್ಷ ಕೃಷಿ ಆದಾಯ ಘೋಷಿಸಿಕೊಂಡಿದ್ದಾರೆ. ಆದರೆ ಅದಕ್ಕೆ ಆಧಾರ ಒದಗಿಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಐಟಿ ಇಲಾಖೆಗೆ ಎಲ್ಲ ಆದಾಯ ಘೋಷಿಸಿದ್ದಾರೆಯೇ ಇಲ್ಲವೇ ಎಂದು ಫೆ.27ಕ್ಕೆ ಮಾಹಿತಿ ನೀಡಲು ಸೂಚಿಸಿ ತನಿಖೆಗೆ ತಡೆ ನೀಡಿ ಆದೇಶಿಸಿದೆ.

ಸರ್ದಾರ್ ಸರ್ಫರಾಜ್ ಖಾನ್ ನಿವಾಸದಲ್ಲಿ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು, 14.38 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ ಮಾಡಿದ್ದರು. 8.44 ಕೋಟಿ ರೂ. ಮೌಲ್ಯ ಸ್ಥಿರಾಸ್ತಿ ಮತ್ತು 5.93 ಕೋಟಿ ರೂ. ಮೊತ್ತದ ಚರಾಸ್ತಿ ದಾಳಿ ವೇಳೆ ಪತ್ತೆಯಾಗಿದೆ. 4 ವಾಸದ ಮನೆ ಮತ್ತು 35 ಎಕರೆ ಕೃಷಿ ಜಮೀನು ದಾಖಲೆ, 66,500 ಹಣ, 2.99 ಲಕ್ಷ ಮೌಲ್ಯದ ಚಿನ್ನ, 1.29 ಕೋಟಿ ಎಫ್​ಡಿ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿತ್ತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *