ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಇನ್ನೂ ಕೆಲವು ದಿನ ಮಳೆ ಸಾಧ್ಯತೆ ಕಡಿಮೆ.
ಬೆಂಗಳೂರು : ಹಲವು ದಿನಗಳಿಂದ ರಾಜ್ಯದೆಲ್ಲೆಡೆ ಹೆಚ್ಚಾದ ತಾಪಮಾನದೊಂದಿಗೆ ಒಣ ಹವೆ ಆವರಿಸಿದ್ದು, ಇಂದೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೂ ಕೆಲ ದಿನ ಇದೇ ರೀತಿಯ ಶುಷ್ಕ ವಾತಾವರಣ ಇರಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಒಣ ಹವೆ?
ಇಂದಿನಿಂದ ಕೆಲ ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಮಾರ್ಚ್ ಎರಡನೇ ವಾರದಲ್ಲಿ ತಾಪಮಾನ ಹೆಚ್ಚಳ
ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.
ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.
For More Updates Join our WhatsApp Group :




