ಬೆಂಗಳೂರು: ಸದಾ ವಿವಾದಗಳಿಂದ ಸುದ್ದಿಯಲ್ಲಿರುವ ಪರಪ್ಪನ ಅಗ್ರಹಾರ ಜೈಲು ಮತ್ತೆ ಅಕ್ರಮದ ವಿಷಯದಿಂದ ಗದ್ದಲಕ್ಕೀಡಾಗಿದೆ. ಈ ಬಾರಿ, ಕೈದಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದವರು ಬೇರೆ ಯಾರೂ ಅಲ್ಲ – ಜೈಲಿನ ವಾರ್ಡನ್ನೇ ಎಂಬುದು ಬಯಲಾಗಿದೆ.
ನೈಟ್ ಶಿಫ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಾರ್ಡನ್ ಕಲ್ಲಪ್ಪ, ಕೈದಿಗಳಿಗೆ ತಂಬಾಕು ಹಾಗೂ ಮಾದಕ ವಸ್ತುಗಳನ್ನು ಕದಿದು ಪೂರೈಸುತ್ತಿದ್ದ. ಸೆಪ್ಟೆಂಬರ್ 7ರಂದು ಸಿಐಎಸ್ಎಫ್ ಸಿಬ್ಬಂದಿಗಳ ಪರಿಶೀಲನೆಯಲ್ಲಿ, ಖಾಕಿ ಪ್ಯಾಂಟ್‌ಗೆ ಸೆಲ್ಲೋಟೇಪ್‌ನಲ್ಲಿ ಸುತ್ತಿಹಾಕಿ ಇಟ್ಟಿದ್ದ 100 ಗ್ರಾಂ ಆಶಿಷ್ ಆಯಿಲ್ ಹಾಗೂ ತಂಬಾಕು ಪತ್ತೆಯಾದ ಬಳಿಕ ಕಲ್ಲಪ್ಪನನ್ನು ಬಂಧಿಸಲಾಯಿತು.
ಬಂಧಿತನ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಲ್ಲಪ್ಪ 2018ರಲ್ಲಿ ಮಾಜಿ ಸೈನಿಕರ ಕೋಟಾದಡಿ ಕಾರಾಗೃಹ ಇಲಾಖೆಗೆ ಸೇರಿದ್ದರು, ಇತ್ತೀಚೆಗೆ ಪರಪ್ಪನ ಅಗ್ರಹಾರದಲ್ಲಿ ವಾರ್ಡನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಕಲ್ಲಪ್ಪ ಯಾವ ಮೂಲದಿಂದ ಮಾದಕ ವಸ್ತುಗಳನ್ನು ತಂದು ಯಾರಿಗೆ ಪೂರೈಕೆ ಮಾಡುತ್ತಿದ್ದ ಎಂಬುದರ ಬಗ್ಗೆ ವಿಚಾರಣೆ ಮುಂದುವರಿದಿದೆ.
ಇದಕ್ಕೂ ಮುನ್ನ ಜೈಲಿನೊಳಗೆ ಕೈದಿಗಳಿಗೆ ಹಣ ಪಡೆದು ಸಿಗರೇಟು, ಎಣ್ಣೆ, ಬಿಸಿ ನೀರು, ಸ್ಪೆಷಲ್ ಊಟ ಸೇರಿದಂತೆ ಅನೇಕ ಸವಲತ್ತುಗಳನ್ನು ನೀಡಲಾಗುತ್ತಿತ್ತು ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಇತ್ತೀಚಿನ ಸಿಸಿಬಿ ದಾಳಿ ವೇಳೆ ಗಾಂಜಾ, ಗುಟ್ಕಾ, ಬಿಸಿ ಉಪಕರಣಗಳು, ಮೊಬೈಲ್ ಚಾರ್ಜರ್, ಚಾಕು, ನಗದು ಹಣ ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದವು. ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ಪೂರೈಕೆ ಪ್ರಕರಣ ಮತ್ತೊಮ್ಮೆ ಜೈಲು ವ್ಯವಸ್ಥೆಯ ಭದ್ರತೆ ಹಾಗೂ ಪಾರದರ್ಶಕತೆ ಬಗ್ಗೆ ದೊಡ್ಡ ಪ್ರಶ್ನೆ ಎಬ್ಬಿಸಿದೆ.
For More Updates Join our WhatsApp Group :
