ಆ ಸ್ಟಾರ್ ನಟನ ಸಿನಿಮಾನಲ್ಲಿ ನಟಿಸಿ ತಪ್ಪು ಮಾಡಿದೆ: Nayanthara ಬೇಸರಕ್ಕೆ ಕಾರಣವೇನು.?

ಆ ಸ್ಟಾರ್ ನಟನ ಸಿನಿಮಾನಲ್ಲಿ ನಟಿಸಿ ತಪ್ಪು ಮಾಡಿದೆ: Nayanthara ಬೇಸರಕ್ಕೆ ಕಾರಣವೇನು.?

ನಯನತಾರಾ ದಕ್ಷಿಣ ಭಾರತದ ಸ್ಟಾರ್ ನಟಿ. ರಜನೀಕಾಂತ್, ಚಿರಂಜೀವಿ ಸೇರಿದಂತೆ ಹಲವಾರು ಸ್ಟಾರ್ ನಟರುಗಳ ಜೊತೆಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ನಯನತಾರಾಗೆ ಆ ಒಬ್ಬ ಸ್ಟಾರ್ ನಟನ ಜೊತೆಗೆ ನಟಿಸಿದ್ದು ಮಾತ್ರ ಇಷ್ಟವಾಗಿಲ್ಲವಂತೆ. ಬ್ಲಾಕ್ ಬಸ್ಟರ್ ಸಿನಿಮಾ ಅದಾಗಿದ್ದರೂ ಸಹ ತಮ್ಮ ವೃತ್ತಿ ಜೀವನದ ಅತ್ಯಂತ ಕೆಟ್ಟ ನಿರ್ಣಯ ಅದಾಗಿತ್ತು ಎಂದು ನಯನತಾರಾ ಹೇಳಿಕೊಂಡಿದ್ದಾರೆ. ಯಾವುದು ಆ ಸಿನಿಮಾ?

ದಕ್ಷಿಣ ಭಾರತದ ಸ್ಟಾರ್ ನಟಿ ನಯನತಾರಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಇತ್ತೀಚೆಗೆ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದು, ಪ್ಯಾನ್ ಇಂಡಿಯಾ ನಟಿ ಎನಿಸಿಕೊಂಡಿದ್ದಾರೆ. ದಶಕಗಳಿಂದಲೂ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡಿರುವ ನಯನತಾರಾ ದಕ್ಷಿಣದ ಹಲವಾರು ಸ್ಟಾರ್ ನಟರುಗಳೊಟ್ಟಿಗೆ ನಾಯಕಿಯಾಗಿ ನಟಿಸಿದ್ದಾರೆ. ನಯನತಾರಾ, ತಮ್ಮ ಶಿಸ್ತು ಜೊತೆಗೆ ಯಾವುದೇ ಅಂಜಿಕೆ ಇಲ್ಲದೆ ಅಭಿಪ್ರಾಯ ಹೇಳುವುದಕ್ಕೆ ಜನಪ್ರಿಯರು. ಒಬ್ಬ ಸ್ಟಾರ್ ನಟನ ಜೊತೆಗೆ ಸಿನಿಮಾದಲ್ಲಿ ನಟಿಸಿ ದೊಡ್ಡ ತಪ್ಪು ಮಾಡಿದೆ ಎಂದು ಕೆಲ ವರ್ಷಗಳ ಹಿಂದೆ ನಯನತಾರಾ ಹೇಳಿಕೊಂಡಿದ್ದರು. ಆ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ.

ತಮಿಳಿನ ಸ್ಟಾರ್ ನಟ ಸೂರ್ಯ ಜೊತೆಗೆ ‘ಗಜಿನಿ’ ಸಿನಿಮಾನಲ್ಲಿ ನಯನತಾರಾ ನಟಿಸಿದ್ದರು. ‘ಗಜಿನಿ’ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಸಿನಿಮಾದಲ್ಲಿ ಕೆಲಸ ಮಾಡಿರುವ ಎಲ್ಲರಿಗೂ ಬಹಳ ಒಳ್ಳೆಯ ಹೆಸರು ಗಳಿಸಿಕೊಟ್ಟಿತು. ಹಾಗಿದ್ದರೂ ಸಹ ನಯನತಾರಾಗೆ ‘ಗಜಿನಿ’ ಸಿನಿಮಾನಲ್ಲಿ ನಟಿಸಿದ್ದು ತುಸುವೂ ಇಷ್ಟ ಆಗಲಿಲ್ಲವಂತೆ. ಅದಕ್ಕೆ ಕಾರಣವನ್ನೂ ಸಹ ನಟಿ ನಯನತಾರಾ ಹಳೆಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

‘ಗಜಿನಿ ಸಿನಿಮಾನಲ್ಲಿ ನಟಿಸಿದ್ದು ನನ್ನ ವೃತ್ತಿ ಜೀವನದ ಅತ್ಯಂತ ಕೆಟ್ಟ ನಿರ್ಧಾರ. ಆ ಸಿನಿಮಾದಲ್ಲಿ ನನ್ನ ಪಾತ್ರ ಕೆಟ್ಟದಾಗಿತ್ತು. ಶೂಟಿಂಗ್ಗೆ ಮುಂಚೆ ನನಗೆ ಹೇಳಿದಂತೆ ಆ ಪಾತ್ರವನ್ನು ತೋರಿಸಲಿಲ್ಲ. ನನ್ನನ್ನು ಅತ್ಯಂತ ಕೆಟ್ಟದಾಗಿ ಆ ಸಿನಿಮಾನಲ್ಲಿ ತೋರಿಸಲಾಗಿದೆ. ಆದರೆ ಆಗ ನಾನು ಆ ಬಗ್ಗೆ ಮಾತನಾಡಲಿಲ್ಲ. ಅದು ವೃತ್ತಿಪರತೆ ಅಲ್ಲ ಎಂದು ಸುಮ್ಮನಿದ್ದೆ. ಆದರೆ ಆ ಸಿನಿಮಾ ಅನ್ನು ನಾನು ಒಪ್ಪಿಕೊಳ್ಳಲೇ ಬಾರದಿತ್ತು. ಅದೊಂದು ಅತ್ಯಂತ ಕೆಟ್ಟ ನಿರ್ಧಾರ ಆಗಿತ್ತು’ ಎಂದಿದ್ದಾರೆ ನಯನತಾರಾ.

‘ಗಜಿನಿ’ ಸಿನಿಮಾನಲ್ಲಿ ನಯನತಾರಾ ಎರಡನೇ ನಾಯಕಿ. ಮೊದಲ ನಾಯಕಿ ಅಸಿನ್. ನಯನತಾರಾ ಅವರ ಪಾತ್ರಕ್ಕೂ ಸಿನಿಮಾನಲ್ಲಿ ಸಾಕಷ್ಟು ಮಹತ್ವ ಇತ್ತು. ಆದರೆ ಅಸಿನ್ ಸಿನಿಮಾದ ನಿಜವಾದ ನಾಯಕಿ. ಬಹುಷಃ ನಯನತಾರಾಗೆ ಅದು ಇಷ್ಟ ಆಗಿಲ್ಲ ಅನಿಸುತ್ತದೆ. ಈ ಹಿಂದೆ ರಜನೀಕಾಂತ್ ನಟನೆಯ ‘ಕುಸೇಲನ್’ ಸಿನಿಮಾನಲ್ಲಿ ಬೇರೊಬ್ಬ ನಾಯಕಿ ಹಾಡೊಂದರಲ್ಲಿ ನಟಿಸಿದರೆಂದು ನಯನತಾರಾ ಆ ಹಾಡನ್ನೇ ಕಟ್ ಮಾಡುವಂತೆ ಮಾಡಿದ್ದರು. ತಮ್ಮ ಪಾತ್ರಕ್ಕಿಂತಲೂ ಇನ್ನೊಬ್ಬ ನಾಯಕಿಯ ಪಾತ್ರಕ್ಕೆ ಪ್ರಾಮುಖ್ಯತೆ ಇದೆಯೆಂದರೆ ನಯನತಾರಾ ಅದನ್ನು ಸಹಿಸುವುದಿಲ್ಲ. ‘ಚಂದ್ರಮುಖಿ’ ಸಿನಿಮಾ ಸಮಯದಲ್ಲಿಯೂ ನಯನತಾರಾ ಅಸಮಾಧಾನ ಹೊರಹಾಕಿದ್ದರಂತೆ.

‘ಗಜಿನಿ’ ಸಿನಿಮಾ ಅನ್ನು ಮುರುಗದಾಸ್ ನಿರ್ದೇಶನ ಮಾಡಿದ್ದರು. ನಯನತಾರಾ ಹೇಳಿಕೆ ಬಗ್ಗೆ ಮಾತನಾಡಿದ್ದ ಮುರುಗದಾಸ್, ‘ಒಮ್ಮೊಮ್ಮೆ, ನಾವು ಇಷ್ಟ ಪಡುವ ನಟ-ನಟಿಯರಿಗೆ ಚಿಕ್ಕ ರೋಲ್ ಕೊಡಬೇಕಾಗುತ್ತದೆ. ಕೆಲವೊಮ್ಮೆ ವೈಯಕ್ತಿಕವಾಗಿ ನಮಗೆ ಆತ್ಮೀಯವಲ್ಲದ ನಟರಿಗೆ ದೊಡ್ಡ ಪಾತ್ರಗಳನ್ನು ನೀಡಬೇಕಾಗುತ್ತದೆ. ಇದೆಲ್ಲ ಸಾಮಾನ್ಯ’ ಎಂದಿದ್ದರು. ಅದಾದ ಬಳಿಕ ಮುರುಗದಾಸ್ ನಿರ್ದೇಶನದ ‘ದರ್ಬಾರ್’ ಸಿನಿಮಾನಲ್ಲಿ ನಯನತಾರಾ ನಟಿಸಿದರು.

Leave a Reply

Your email address will not be published. Required fields are marked *