ಬೆಂಗಳೂರು: ‘ನಾನು ಹುಟ್ಟಿದ್ದೇ ಕಾಂಗ್ರೆಸ್ಸಿಗನಾಗಿ. ನಾನು ಸಾಯುವುದೂ ಕಾಂಗ್ರೆಸ್ಸಿಗನಾಗಿಯೇ. ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು’ ಎಂದು ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ತಿರುಗೇಟು ನೀಡಿದರು. ವಿಧಾನಸಭೆಯಲ್ಲಿ ಆರ್ಎಸ್ಎಸ್ ಗೀತೆ ಹಾಡಿದ ವಿಚಾರವಾಗಿ ಕಾಂಗ್ರೆಸ್ನ ಅನೇಕ ನಾಯಕರು ಡಿಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದ್ದರು. ಬಿಕೆ ಹರಿಪ್ರಸಾದ್ ಅವರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಆರ್ಎಸ್ಎಸ್ ಗೀತೆ ಹಾಡಿದ್ದರೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಬೆಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿರೋಧ ಪಕ್ಷದ ಸಿದ್ಧಾಂತದ ಅರಿವಿದೆ ಎಂದು ವಿಧಾನಸಭೆಯಲ್ಲಿ ಕಾಲೆಳೆದೆ ಅಷ್ಟೆ. ಅದು ಬಿಟ್ಟರೆ ಇನ್ನೇನಿಲ್ಲ ಎಂದರು.
ವಿಧಾನಸಭೆಯಲ್ಲಿ ಆಚಾರ ವಿಚಾರಗಳನ್ನು ಪಾಲನೆ ಮಾಡಿಕೊಂಡು ಬಂದಿದ್ದೇನೆ. ವಿದ್ಯಾರ್ಥಿ ಸಂಘಟನೆಯಲ್ಲಿಂದಲೇ ಗುರುತಿಸಿಕೊಂಡು ಬಂದಿದ್ದೇನೆ. ಹೊಸದಾಗಿ ಕಾಂಗ್ರೆಸ್ ಸೇರಿಲ್ಲ, ಯಾರ ಪಾಠವೂ ಅಗತ್ಯವಿಲ್ಲ. ನನಗೂ ಗಾಂಧಿ ಕುಟುಂಬಕ್ಕೂ ಭಕ್ತ ಭಗವಂತನ ನಡುವಿರುವ ಸಂಬಂಧ. ನಾನು ಎಂಎ ಪೊಲೀಟಿಕಲ್ ವಿದ್ಯಾರ್ಥಿ. ರಾಜಕಾರಣಕ್ಕೆ ಬರೋದಕ್ಕಿಂತಲೂ ಮುನ್ನ ಎಲ್ಲಾ ಪಕ್ಷಗಳ ಅಧ್ಯಯನ ಮಾಡಿದ್ದೇನೆ. ಕಮ್ಯೂನಿಸಂ, ಬಿಜೆಪಿ, ಆರ್ಎಸ್ಎಸ್, ದಳ ಎಲ್ಲ ಪಕ್ಷಗಳ ಬಗ್ಗೆ ತಿಳಿದಿದ್ದೇನೆ. ಮುಸ್ಲಿಂ ಲೀಗ್ ಸಮಾವೇಶದಲ್ಲೂ ಭಾಗಿಯಾಗಿದ್ದೆ. ಅವರ ಶಿಸ್ತಿಗೆ ಬೆರೆಗಾಗಿದ್ದೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಅಲ್ಲದೆ, ಬೇಕಾದರೆ ಕ್ಷಮೆ ಕೇಳೋಣ. ಬಿಕೆ ಹರಿಪ್ರಸಾದ್ಗೂ ಕ್ಷಮೆ ಕೇಳೋಣ ಎಂದರು.
ನನ್ನ ಧರ್ಮ ನಾನು ಬಿಡಲ್ಲ: ಡಿಕೆ ಶಿವಕುಮಾರ್
ನಾನು ಕಾಂಗ್ರಸ್ ಪಕ್ಷದಲ್ಲಿದ್ದೇನೆ ನಿಜ. ಹಾಗೆಂದು ನನ್ನ ಧರ್ಮ ನಾನು ಬಿಡಲ್ಲ. ನನ್ನ ಧರ್ಮದ ಜತೆಗೆ ಇತರ ಧರ್ಮಗಳ ಬಗ್ಗೆಯೂ ನನಗೆ ನಂಬಿಕೆ ಇದೆ. ಮುಸ್ಲಿಂ, ಕ್ರಿಶ್ಚಿಯನ್ ಇತರ ಧರ್ಮಗಳ ಬಗ್ಗೆಯೂ ಗೌರವ ಇದೆ. ಆದರೆ, ಇವೆಲ್ಲದಕ್ಕಿಂತಲೂ ಮಾನವ ಧರ್ಮದ ಮೇಲೆ ನಾನು ಹೆಚ್ಚು ನಂಬಿಕೆ ಇಟ್ಟಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ನಾನು ಕ್ಷಮೆ ಕೇಳೂವಂಥ ತಪ್ಪನ್ನು ಮಾಡಿಲ್ಲ. ವಿರೋಧ ಪಕ್ಷದ ಸಿದ್ಧಾಂತದ ಅರಿವಿದೆ ಎಂಬುದನ್ನು ತೋರಿಸುವುದಕ್ಕಾಗಿ ವಿಧಾನಸಭೆಯಲ್ಲಿ ಕಾಳೆದೆ ಅಷ್ಟೆ. ಯಾರಿಗೇ ಆಗಲಿ ನನ್ನಿಂದ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧ. ಕಾಂಗ್ರೆಸ್ ನಾಯಕರು- ಕಾರ್ಯಕರ್ತರು, ಇಂಡಿ ಒಕ್ಕೂಟದ ನಾಯಕರು ಸೇರಿದಂತೆ ಎಲ್ಲರ ಬಳಿಯೂ ಕ್ಷಮೆ ಕೇಳುತ್ತೇನೆ. ಆದರೆ, ಒಂದು ವಿಚಾರ ಸ್ಪಷ್ಟ ಇರಲಿ. ಯಾರೂ ನನ್ನನ್ನು ಪ್ರಶ್ನೆ ಮಾಡಿಲ್ಲ. ಹೈಕಮಾಂಡ್ ಕೂಡ ಕೇಳಿಲ್ಲ. ಈ ವಿಚಾರ ಇಲ್ಲಿಗೆ ಮುಗಿಸೋಣ. ನನ್ನ ಮತ್ತು ಕಾಂಗ್ರೆಸ್ ಸಂಬಂಧ ಭಕ್ತ ಮತ್ತು ಭಗವಂತನ ಸಂಬಂಧದಂತೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
For More Updates Join our WhatsApp Group :