ಬೆಂಗಳೂರು: ಮಹಿಳೆಯರಿಗೆ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಶಕ್ತಿ ಯೋಜನೆ ಆರಂಭವಾಗಿ ಎರಡು ವರ್ಷ ತುಂಬಿದ್ದು, ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಇಲ್ಲಿಯವರೆಗೆ ಮಹಿಳೆಯರು ಸುಮಾರು 500 ಕೋಟಿಯಷ್ಟು ಬಾರಿ ಉಚಿತವಾಗಿ ಸಂಚಾರ ಮಾಡಿದ್ದಾರೆ. ಆದರೆ ಇಂತಹ ಯೋಜನೆ ಬಗ್ಗೆ ಕೆಲ ಸಾರಿಗೆ ನೌಕರರು ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರಯಾಣಿಕರಿಂದ ಕೂಡ ಸಾಕಷ್ಟು ದೂರುಗಳು ಬಂದಿವೆ ಎನ್ನಲಾಗಿದ್ದು, ಈ ಹಿನ್ನೆಲೆ ಸಾರಿಗೆ ನಿಗಮಗಳು ಖಡಕ್ ಸುತ್ತೋಲೆ ಹೊರಡಿಸಿವೆ.
ಇನ್ನು ಮುಂದೆ ಸರ್ಕಾರದ ಶಕ್ತಿ ಯೋಜನೆ ವಿರುದ್ದ ಸಾರಿಗೆ ನೌಕರರು ಮನಬಂದಂತೆ ಮಾತನಾಡುವಂತಿಲ್ಲ. ಬಸ್ನಲ್ಲಿ ಪ್ರಯಾಣಿಕರ ಜೊತೆಗೆ ಬೇಕಾಬಿಟ್ಟಿಯಾಗಿ ಮಾತನಾಡಿದರೆ ಸಂಕಷ್ಟ ಕಾದಿದೆ. ಶಕ್ತಿ ಯೋಜನೆ ಬಗ್ಗೆ ಮಾತನಾಡಿದರೆ ನೌಕರರು ಅಮಾನತಾಗಲಿದ್ದಾರೆ ಎಂದು ಸಾರಿಗೆ ನಿಗಮಗಳ ಸುತ್ತೋಲೆ ತಿಳಿಸಿದೆ. ಅಂಜಿಕೆ, ಭಯ ಇಲ್ಲದೆ ಶಕ್ತಿ ಸ್ಕೀಂ ಬಗ್ಗೆ ಸಾರಿಗೆ ನೌಕರರು ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ದೂರುಗಳ ಆಧಾರದಲ್ಲಿ ಎಲ್ಲಾ ಡಿಸಿಗಳಿಗೆ ಸಾರಿಗೆ ನಿಗಮಗಳು ಖಡಕ್ ಸೂಚನೆ ನೀಡಿವೆ.
ಆದರೆ ಇದಕ್ಕೆ ಸಾರಿಗೆ ನೌಕರರು ಸರ್ಕಾರದ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಮಹಿಳೆಯರಿಗೆ ಈ ಯೋಜನೆಯಿಂದ ಉಪಯೋಗ ಆಗುತ್ತಿದೆ ನಿಜ. ಆದರೆ ಸಾರಿಗೆ ನೌಕರರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಕೂಡಲೇ ಈ ಆದೇಶ ವಾಪಸ್ ಪಡೆಯಬೇಕೆಂದು ನೌಕರರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ, ಶಕ್ತಿ ಯೋಜನೆ ಬಗ್ಗೆ ಬೇಕಾಬಿಟ್ಟಿಯಾಗಿ ಮಾತನಾಡಿದರೆ ಕ್ರಮ ಕೈಗೊಳ್ಳುತ್ತೇವೆಂದು ಈಗಾಗಲೇ ಸುತ್ತೋಲೆ ಹೊರಡಿಸಲಾಗಿದ್ದು, ಸಾರಿಗೆ ನೌಕರರ ಆಕ್ರೋಶಕ್ಕೆ ಕಾರಣವಾಗಿರುವುದಂತೂ ಸುಳ್ಳಲ್ಲ.
For More Updates Join our WhatsApp Group :
