ಬೆಂಗಳೂರು: ಆಶ್ರಮ ಶಾಲೆಯ ಮಕ್ಕಳು, ಆರ್ಥಿಕ ಹಿಂದುಳಿದವರು, ದಲಿತ ಮಕ್ಕಳ ಶಿಕ್ಷಣಕ್ಕಾಗಿ ಕೆಲಸ ಮಾಡದ ಅಧಿಕಾರಿಗಳು ಸೇವೆಯಲ್ಲಿರಲು ಅನರ್ಹರು ಎಂದು ಅಧಿಕಾರಿಗಳ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಕಿಡಿಕಾರಿದರು.
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯೊಂದಿಗೆ ಮಂಗಳವಾರ ಸಿಎಂ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಆಶ್ರಮ ಶಾಲೆಯ ಮಕ್ಕಳು, ಬಡವರು, ದಲಿತ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯಕ್ಕೆ ಗರಂ ಆಗಿ ಅಧಿಕಾರಿಗಳನ್ನು ತೀವ್ರವಾಗಿ ಸಿಎಂ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಆಶ್ರಮ ಶಾಲೆಗಳಿಗೆ ರಾತ್ರಿ ವೇಳೆ ಭೇಟಿ ನೀಡಿ ವ್ಯವಸ್ಥೆ ಗಮನಿಸದ್ದಕ್ಕೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಬಳಿಕ ನಿಯಮಿತವಾಗಿ ಹಾಸ್ಟೆಲ್ ಗಳಿಗೆ, ಆಶ್ರಮ ಶಾಲೆಗಳಿಗೆ ಭೇಟಿ ನೀಡಬೇಕು. ನಿರಂತರವಾಗಿ ಗುಣಮಟ್ಟ ಹೆಚ್ಚಿಸಲು ಶ್ರಮಿಸಬೇಕು ಎಂದು ಖಡಕ್ ಸೂಚನೆ ನೀಡಿದರು.
ಇಲಾಖೆಯ ಒಟ್ಟಾರೆ ಆಯವ್ಯಯದಲ್ಲಿ ಬಿಡುಗಡೆಯಾದ ಮೊತ್ತ 1884.01 ಕೋಟಿ ರೂ. ನಲ್ಲಿ 1879.35 ಕೋಟಿ ವೆಚ್ಚವಾಗಿದ್ದು, ಶೇ,99.75ರಷ್ಟು ಸಾಧನೆಯಾಗಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ 389 ವಿದ್ಯಾರ್ಥಿ ನಿಲಯಗಳು, ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳು – 39,541 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಒದಗಿಸಿದ್ದು, 194.71 ಕೋಟಿ ರೂ. ಒದಗಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ. 77 ರಷ್ಟು ಫಲಿತಾಂಶ ಬಂದಿದ್ದು, ಫಲಿತಾಂಶ ಉತ್ತಮ ಪಡಿಸಲು ಸೂಚನೆ ನೀಡಿದರು.