ಮಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಭಾಗಗಳಲ್ಲೂ ಹವಾಮಾನ ಇಲಾಖೆ ಭಾರೀ ಮಳೆ ಅಲರ್ಟ್ ನೀಡಿದ್ದು, ಇಂದಿನಿಂದ ಜೂನ್ 30ರ ವರೆಗೂ ಐದು ದಿನಗಳ ಕಾಲ ಮಳೆ ಮುನ್ಸೂಚನೆ ನೀಡಲಾಗಿದೆ. ಇಂದು ಕರಾವಳಿ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಜ್ಯ ಹವಾಮಾನ ಇಲಾಖೆ ಉತ್ತರ ಒಳನಾಡು ಪ್ರದೇಶಗಳಿಗೆ ಯೆಲ್ಲೋ ಅಲರ್ಟ್ ನೀಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಮಂಡ್ಯ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇದರ ನಡುವೆಯೇ ಮನೆಯ ಗೋಡೆ ಕುಸಿದು ಬಿದ್ದು ನಾಲ್ವರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುತ್ತಾರು ಮದನಿ ನಗರ ಎಂಬಲ್ಲಿ ನಡೆದಿದೆ. ಅಬೂಬಕ್ಕರ್ ಎಂಬವರಿಗೆ ಸಂಬಂಧಿಸಿದ ಮನೆಯ ಗೋಡೆ ಕುಸಿತವಾಗಿದೆ. ಈ ವೇಳೆ ಮನೆಯೊಳಗಿದ್ದ ಯಾಸಿರ್ (45), ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ ಮತ್ತು ರಿಫಾನ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
ಸದ್ಯ ಮೂವರ ಮೃತದೇಹ ಹೊರತೆಗೆದ ಸ್ಥಳೀಯರು, ಮತ್ತೊಬ್ಬ ಬಾಲಕಿ ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರಿ ಸುರಿದ ಭಾರೀ ಮಳೆಗೆ ದುರಂತ ಸಂಭವಿಸಿದ್ದು, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿದ್ದು, ಘಟನೆ ನಡೆದ ಮನೆ ಎತ್ತರ ತಗ್ಗು ಪ್ರದೇಶದಲ್ಲಿದೆ. ಪಕ್ಕದ ಮನೆಯ ಆವರಣ ಗೋಡೆ ಮನೆಯ ಮೇಲೆ ಕುಸಿದು ಘಟನೆ ಸಂಭವಿಸಿದೆ. ಘಟನೆಯಲ್ಲಿ ಒಂದು ಗಂಡು ಮಗು, ಒಂದು ಹೆಣ್ಣು ಮಗು ಸೇರಿದಂತೆ ದಂಪತಿ ಸಾವನ್ನಪ್ಪಿದ್ದಾರೆ. ಈ ಕುಟುಂಬದ ಇನ್ನೊಬ್ಬ ಹೆಣ್ಣು ಮಗಳು ಕೇರಳದಲ್ಲಿದ್ದಾರೆ, ಮೃತರ ಪೋಸ್ಟ್ ಮಾರ್ಟಮ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.