ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟ ನೀರು ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಜನರು ತಾಮ್ರದಿಂದ ತಯಾರಿಸಿದಂತಹ ನೀರಿನ ಬಾಟಲಿಗಳನ್ನು ಬಳಸುವುದಕ್ಕೆ ಆರಂಭ ಮಾಡಿದರು. ಇತ್ತೀಚಿಗಂತೂ ಈ ಅಭ್ಯಾಸ ತುಂಬಾ ಹೆಚ್ಚಾಗಿದೆ. ಆದರೆ ಒಂದು ವಿಷಯದ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳದಿದ್ದರೆ ಸಮಸ್ಯೆಗಳು ಹೆಚ್ಚಾಗುತ್ತದೆ. ಅಂದರೆ ತಾಮ್ರದ ನೀರಿನ ಬಾಟಲಿಗಳಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಅದಕ್ಕೂ ಮೊದಲು ಅದನ್ನು ಯಾವ ರೀತಿ ಬಳಸಬೇಕು ಎಂಬುದು ತಿಳಿದಿರಬೇಕಾಗುತ್ತದೆ. ಕೆಲವು ನಿಯಮಗಳನ್ನು ಸರಿಯಾಗಿ ಅನುಸರಿಸದಿದ್ದರೆ ಯಾವ ರೀತಿ ತೊಂದರೆಗಳಾಗುತ್ತವೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಇತ್ತೀಚಿನ ದಿನಗಳಲ್ಲಿ ತಾಮ್ರದ ನೀರಿನ ಬಾಟಲಿಗಳನ್ನು ಬಳಸುವ ಟ್ರೆಂಡಿಂಗ್ ಹೆಚ್ಚಾಗಿದೆ. ಅವುಗಳಿಂದ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳು ಇರುವುದರಿಂದ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ನಿಮಗೆ ಗೊತ್ತಾ? ಇದನ್ನು ಬಳಸುವುದಕ್ಕಿಂತ ಮುಂಚೆ ಇದನ್ನು ಉಪಯೋಗಿಸುವ ಸರಿಯಾದ ವಿಧಾನವನ್ನು ತಿಳಿದಿರಬೇಕಾಗುತ್ತದೆ. ಏಕೆಂದರೆ ತಾಮ್ರವು ಪ್ರತಿಕ್ರಿಯಾತ್ಮಕ ಲೋಹ ಹಾಗಾಗಿ ಇದನ್ನು ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಮಾತ್ರವಲ್ಲ ಆರೋಗ್ಯಕರ ಗುಣಗಳಿರುವ ಈ ಬಾಟಲಿಗಳನ್ನು ಬಳಸುವುದಕ್ಕೆ ಕೆಲವು ನಿಯಮಗಳಿವೆ. ಅದನ್ನು ಸರಿಯಾಗಿ ಅನುಸರಿಸಬೇಕಾಗುತ್ತದೆ. ಹಾಗಾದರೆ, ಆ ನಿಯಮಗಳು ಯಾವುವು? ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
• ತಾಮ್ರದ ಬಾಟಲಿಯಲ್ಲಿ ನೀರನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ಜ್ಯೂಸ್, ನಿಂಬೆ ಪಾನಕ ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ತುಂಬಿಸಿ ಇಡಬೇಡಿ. ಏಕೆಂದರೆ ಇವುಗಳನ್ನು ತಾಮ್ರದ ಪಾತ್ರೆಯಲ್ಲಿ ಇರಿಸಿದರೆ, ಅದರಲ್ಲಿನ ಆಮ್ಲೀಯತೆ ತಾಮ್ರದೊಂದಿಗೆ ಪ್ರತಿಕ್ರಿಯಿಸಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.
• ತಾಮ್ರದ ಬಾಟಲಿಯಲ್ಲಿ ನೀರನ್ನು ದೀರ್ಘಕಾಲ ಸಂಗ್ರಹಿಸಬೇಡಿ. ರಾತ್ರಿಯಿಡೀ ತಾಮ್ರದ ಬಾಟಲಿಯಲ್ಲಿ ನೀರನ್ನು ಇರಿಸಿ ಮರುದಿನ ಬೆಳಿಗ್ಗೆ ಕುಡಿಯುವುದು ಒಳ್ಳೆಯದು. ಆದರೆ ಆ ಬಾಟಲಿಯಲ್ಲಿ ಹಲವು ದಿನಗಳ ವರೆಗೆ ನೀರನ್ನು ಇಡಬೇಡಿ. ತಾಮ್ರದ ಬಾಟಲಿಯಲ್ಲಿ ನೀರು ಹೆಚ್ಚು ಕಾಲ ಇದ್ದರೆ, ಅದು ಹೆಚ್ಚಿನ ಲೋಹವನ್ನು ಹೀರಿಕೊಳ್ಳುತ್ತದೆ. ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
• ತಾಮ್ರದ ಬಾಟಲಿ ಸ್ವಚ್ಛಗೊಳಿಸಲು ಗಟ್ಟಿಯಾದ ಸ್ಕ್ರಬ್ ಬಳಸುವ ಅಗತ್ಯವಿಲ್ಲ. ಆದರೆ ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಮಾತ್ರ ಅತ್ಯಗತ್ಯ. ಇಲ್ಲದಿದ್ದರೆ, ಕೊಳಕು ಮತ್ತು ಹಸಿರು ಕಲೆಗಳು ರೂಪುಗೊಂಡು ಆಕ್ಸಿಡೀಕರಣಕ್ಕೆ ಒಳಗಾಗುತ್ತದೆ. ಇದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ಸಾಧ್ಯವಾದರೆ ತಾಮ್ರದ ಬಾಟಲಿಯನ್ನು ಉಪ್ಪು ಮತ್ತು ಹುಣಸೆ ಹಣ್ಣಿನಂತಹ ಪದಾರ್ಥಗಳಿಂದ ಸ್ವಚ್ಛಗೊಳಿಸಿ.
• ಬಾಟಲಿ ತೊಳೆದ ನಂತರ ಅದನ್ನು ಒಣಗಿಸದೆಯೇ ಇಡಬೇಡಿ. ಮುಚ್ಚಿಟ್ಟ ತಾಮ್ರದ ಬಾಟಲಿಯೊಳಗಿನ ತೇವಾಂಶ ಬಣ್ಣ ಬದಲಾವಣೆಗೆ ಮಾತ್ರವಲ್ಲ ವಾಸನೆಗೂ ಕಾರಣವಾಗುತ್ತದೆ. ಹಾಗಾಗಿ ನೀವು ಬಳಸುವ ತಾಮ್ರದ ಬಾಟಲಿಯನ್ನು ಸ್ವಚ್ಛವಾಗಿ ತೊಳೆದ ನಂತರ, ಮುಚ್ಚಳವನ್ನು ತೆರೆದಿಡಿ ಮತ್ತು ಬಾಟಲಿಯನ್ನು ಗಾಳಿಯಲ್ಲಿ ಸಂಪೂರ್ಣವಾಗಿ ಒಣಗಲು ಬಿಡಿ. ಈ ಸಣ್ಣ ಅಭ್ಯಾಸವು ನಿಮ್ಮ ಬಾಟಲಿಯನ್ನು ತಾಜಾವಾಗಿರಿಸುತ್ತದೆ. ಇಲ್ಲದಿದ್ದರೆ, ನಂತರ ಬಳಸಿದಾಗ ಅದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
• ತಾಮ್ರದ ನೀರಿನ ಬಾಟಲಿಯಿಂದ ಹೆಚ್ಚು ನೀರು ಕುಡಿಯಬೇಡಿ. ಹೌದು, ಬಾಟಲಿಯಿಂದ ಆರೋಗ್ಯಕ್ಕೆ ಪ್ರಯೋಜನಗಳಿದ್ದರೂ, ಅದರಲ್ಲಿ ಹೆಚ್ಚು ನೀರು ಕುಡಿಯುವುದು ಸರಿಯಲ್ಲ. ಇದರಿಂದ ವಾಕರಿಕೆ ಮತ್ತು ಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಉಂಟಾಗಬಹುದು. ಕೆಲವು ಸಂದರ್ಭಗಳಲ್ಲಿ, ಇದು ವಿಷಕಾರಿಯಾಗಬಹುದು. ಹಾಗಾಗಿ ತಾಮ್ರದ ಬಾಟಲಿಯಿಂದ ದಿನಕ್ಕೆ ಒಂದು ಅಥವಾ ಎರಡು ಗ್ಲಾಸ್ ನೀರು ಕುಡಿಯುವುದು ಉತ್ತಮ.
For More Updates Join our WhatsApp Group :